ತಿರುಪತಿ: ಕೊರೋನಾ ಸೋಂಕಿತ ವ್ಯಕ್ತಿ ಭೇಟಿ, ದೇಗುಲ ಬಂದ್
ತಿರುಪತಿ: ವಿಶ್ವದ ಶ್ರೀಮಂತ ದೇಗುಲ ಮತ್ತು ಖ್ಯಾತ ಪವಿತ್ರ ಯಾತ್ರಾ ಸ್ಥಳ ತಿರುಪತಿ ತಿರುಮಲದಲ್ಲೂ ಕೊರೋನಾ ಭೀತಿ ಆರಂಭವಾಗಿದ್ದು, ಕೊರೋನಾ ಸೋಂಕಿತ ವ್ಯಕ್ತಿ ದೇಗುಲ ಭೇಟಿ ನೀಡಿದ್ದ ಅಂಶ ಇದೀಗ ಬೆಳಕಿಗೆ ಬಂದಿದೆ.
ಮಹಾರಾಷ್ಟ್ರ ಮೂಲದ ಕೊರೋನಾ ವೈರಸ್ ಸೋಂಕಿತ ವ್ಯಕ್ತಿ ತನ್ನ ಕುಟುಂಬದೊಂದಿಗೆ ತಿರುಮಲ ದೇಗುಲಕ್ಕೆ ಭೇಟಿ ನೀಡಿದ್ದರು ಎನ್ನಲಾಗಿದೆ. ದರ್ಶನಕ್ಕೆ ತೆರಳಿದ್ದಾಗ ಸೋಂಕಿತನ ಆರೋಗ್ಯ ಗಂಭೀರವಾಗಿದ್ದು, ಕೂಡಲೇ ಆತನನ್ನು ಆ್ಯಂಬುಲೆನ್ಸ್ ಮೂಲಕವಾಗಿ ಟಿಟಿಡಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಂತೆಯೇ ಸೋಂಕಿತನೊಂದಿಗೆ ಇದ್ದ ಆತನ ಸಂಬಂಧಿಕರನ್ನೂ ಕೂಡ ಪ್ರತ್ಯೇಕವಾಗಿ ಇರಿಸಲಾಗಿದ್ದು, ತಿರುಮಲದ ಮಾಧವನಿಲಯದಲ್ಲಿ ಪ್ರತ್ಯೇಕ ಕೊಠಡಿಯಲ್ಲಿರಿಸಿ ತೀವ್ರ ನಿಗಾ ಇರಿಸಲಾಗಿದೆ ಎಂದು ತಿಳಿದುಬಂದಿದೆ.
ಅಂತೆಯೇ ಮುಂಜಾಗ್ರತಾ ಕ್ರಮವಾಗಿ ತಿರುಮಲ ದೇಗುಲವನ್ನು ತಾತ್ಕಾಲಿಕವಾಗಿ ಮುಚ್ಚುವ ಕುರಿತು ಟಿಟಿಡಿ ಅಧಿಕಾರಿಗಳು ಚಿಂತನೆಯಲ್ಲಿ ತೊಡಗಿದ್ದು, ಈಗಾಗಲೇ ಈ ಸಂಬಂಧ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಿದ್ದಾರೆ ಎನ್ನಲಾಗಿದೆ. ಈ ಸಂಬಂಧ ತಿರುಮಲದಲ್ಲಿರುವ ಎಲ್ಲ ಭಕ್ತಾದಿಗಳನ್ನು ತಿರುಪತಿಗೆ ವಾಪಸ್ ಕಳುಹಿಸಲಾಗುತ್ತಿದ್ದು, ಇದರ ಮೊದಲ ಹಂತವಾಗಿ ಅಲಿಪಿರಿ ಮೂಲಕ ಕಾಲ್ನಡಿಗೆ ಭಕ್ತಾದಿಗಳನ್ನು ವಾಪಸ್ ಕಳುಹಿಸಲಾಗುತ್ತಿದೆ ಎಂದು ಹೇಳಲಾಗಿದೆ. ಕ್ರಮೇಣ ಬೆಟ್ಟದ ಮೇಲಿರುವ ಎಲ್ಲ ಭಕ್ತಾದಿಗಳನ್ನೂ ಕೆಳಗೆ ಕಳುಹಿಸಿ ಬಳಿಕ ದೇಗುಲವನ್ನು ತಾತ್ಕಾಲಿಕವಾಗಿ ಮುಚ್ಚಿ ಸ್ವಚ್ಛತಾ ಕಾರ್ಯ ನಡೆಸಲಾಗುತ್ತದೆ ಎಂದು ಹೇಳಲಾಗಿದೆ. ಇನ್ನು ಈ ಬಗ್ಗೆ ಟಿಟಿಡಿ ಅಧ್ಯಕ್ಷ ವೈ ವಿ ಸುಬ್ಬಾ ರೆಡ್ಡಿ ಅವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು, ಕಳೆದ ಹಲವು ದಿನಗಳಿಂದ ದೇಗಲುಕ್ಕೆ ಆಗಮಿಸದಂತೆ ಭಕ್ತಾದಿಗಳಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ. ಆದರೀಗ ದೇಗುಲವನ್ನು ಮುಚ್ಚಲೇ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಭಕ್ತರಿಗೆ ದೇಗುಲ ಮುಚ್ಚಿದರೂ ಅಲ್ಲಿನ ಅರ್ಚಕರು ನಿತ್ಯ ಪೂಜಾ ಕೈಂಕರ್ಯ ಮುಂದುವರೆಸಲಿದ್ದಾರೆ ಎಂದು ಹೇಳಿದ್ದಾರೆ.