ಟಿಪ್ಪು ಜಯಂತಿ ರದ್ದಾಯಿತು: ಈಗ ಎಸಿಬಿ ಸರದಿ?
ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಜಾರಿಗೆ ತಂದ ಟಿಪ್ಪು ಜಯಂತಿಯನ್ನು ರದ್ದು ಮಾಡಿದ ಬೆನ್ನಲ್ಲೇ ಅವರು ಜಾರಿಗೆ ತಂದಿದ್ದ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ರದ್ದು ಮಾಡಲು ಸಿಎಂ ಯಡಿಯೂರಪ್ಪ ಮುಂದಾಗಿದ್ದಾರೆ.
ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಜಾರಿಯಾಗಿದ್ದ ಎಸಿಬಿ ರದ್ದು ಪಡಿಸಲು ಬಿಜೆಪಿ ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ.
ಚುನಾವಣಾ ಪ್ರಣಾಳಿಕೆಯಲ್ಲಿ ಎಸಿಬಿ ರದ್ದು ಮಾಡುವುದಾಗಿ ಬಿಜೆಪಿ ಹೇಳಿತ್ತು. ಈ ಕಾರಣದಿಂದ ಈಗ ಪ್ರಣಾಳಿಕೆಯ ಅಂಶವಾಗಿ ಎಸಿಬಿ ರದ್ದು ಮಾಡಿ ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ನೀಡಲು ಮಹತ್ವದ ಚರ್ಚೆ ನಡೆದಿದೆ ಎನ್ನಲಾಗುತ್ತಿದೆ. ಈ ನಿಟ್ಟಿನಲ್ಲಿ ಬಿಜೆಪಿ ಹೈಕಮಾಂಡ್ ಮಟ್ಟದಲ್ಲೂ ಎಸಿಬಿ ರದ್ದು ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ.
2016ರಲ್ಲಿ ಸಿದ್ದರಾಮಯ್ಯ ಎಸಿಬಿ ರಚನೆ ಮಾಡಿದ್ದರು. ಇದು ರಾಜ್ಯ ಸರ್ಕಾರದ ಅಧಿನದಲ್ಲಿ ಇರುತ್ತದೆ. ಎಸಿಬಿ ವಿರುದ್ಧ ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಅಸಮಾಧಾನ ವ್ಯಕ್ತಪಡಿಸಿದ್ದರು.
ಅಕ್ರಮ ಗಣಿಕಾರಿಕೆಗೆ ಸಂಬಂಧಿಸಿದಂತೆ ನನ್ನ ವರದಿ ಆಧಾರದ ಮೇಲೆ ಕಾಂಗ್ರೆಸ್ ಬಳ್ಳಾರಿವರೆಗೆ ಪಾದಯಾತ್ರೆ ಮಾಡಿತ್ತು. ಆದರೆ, ಅಧಿಕಾರಕ್ಕೆ ಬಂದ ಬಳಿಕ ಲೋಕಾಯುಕ್ತವನ್ನೇ ದುರ್ಬಲಗೊಳಿಸಿತು. 2016ರಲ್ಲಿ ಯಾವುದೇ ಚರ್ಚೆ ಮಾಡದೆ ದಿಢೀರ್ ಎಸಿಬಿ ರಚಿಸಿತ್ತು ಎಂದು ಸಂತೋಷ್ ಹೆಗ್ಡೆ ನೇರವಾಗಿ ಅಸಮಾಧಾನ ಹೊರ ಹಾಕಿದ್ದರು.
ಎಸಿಬಿಯೂ ಒಂದು ಸಂಸ್ಥೆಯೇ? ಅನುಮತಿ ಪಡೆದು ತನಿಖೆ ಮಾಡ್ಬೇಕೇ? ಎಸಿಬಿ ಸರ್ಕಾರದ ಕೈ ಅಡಿಯಲ್ಲಿರುವ ಸಂಸ್ಥೆ. ನನ್ನ ಕಾಲದಲ್ಲಿ ಉತ್ತಮ ಪೊಲೀಸ್ ಅಧಿಕಾರಿಗಳಿದ್ದರು. ಎಲ್ಲ ಭ್ರಷ್ಟರ ಮೇಲೆ ದಾಳಿ ಮಾಡುತ್ತಿದ್ದರು. ಆ ಧೈರ್ಯ ಎಸಿಬಿಗೆ ಇಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದರು