ಉಡುಪಿ, ಮಂಗಳೂರು ಜಿಲ್ಲೆಗೆ ಚಂಡಮಾರುತ ಭೀತಿ: ಹವಾಮಾನ ಇಲಾಖೆ
ಬೆಂಗಳೂರು : ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿರೋ ಬೆನ್ನಲ್ಲೇ ದೇಶದಲ್ಲೀಗ ಚಂಡಮಾರುತದ ಆತಂಕ ಶುರುವಾಗಿದೆ. ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ರೂಪುಗೊಳ್ಳುವ ಸಾಧ್ಯತೆಯಿದ್ದು, ಅಂಡಮಾನ್, ನಿಕೋಬಾರ್, ಪಶ್ಚಿಮ ಬಂಗಾಲದಲ್ಲಿ ಅತೀಯಾಗಿ ಮಳೆ ಸುರಿಯಲಿದ್ದು, ಕೇರಳ ತಮಿಳುನಾಡು ಮತ್ತು ಕರ್ನಾಟಕದಲ್ಲಿಯೂ ಮಳೆಯ ಅಬ್ಬರ ಜೋರಾಗಿರುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆಯನ್ನು ನೀಡಿದೆ. ಕೇರಳ ರಾಜ್ಯದಲ್ಲಿ ಈಗಾಗಲೇ ಯಲ್ಲೋ ಆಲರ್ಟ್ ಘೋಷಣೆ ಮಾಡಲಾಗಿದ್ದು, ಕರ್ನಾಟಕದ ಉಡುಪಿ, ಮಂಗಳೂರು, ಕೊಡಗು, ಬೆಳಗಾವಿ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ. ಮೇ 16ರಿಂದಲೇ ಚಂಡಮಾರುತದ ಅಬ್ಬರ ಜೋರಾಗಲಿದ್ದು, ಗಂಟೆಗೆ 172 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸಲಿದೆ. ಇಂದು ರಾತ್ರಿ 75 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸಲಿದ್ದು, ಗಂಟೆ ಗಂಟೆಗೂ ಗಾಳಿಯ ರಭಸ ಹೆಚ್ಚಾಗಲಿದೆ. ಕೇರಳದಲ್ಲಿ ಇನ್ನೂ ಎರಡು ದಿನಗಳ ಕಾಲ ಮಳೆಯ ಆರ್ಭಟ ಜೋರಾಗಿರಲಿದೆ. ಅಂಡಮಾನ್, ನಿಕೋಬಾರ್ ನಲ್ಲಿಯೂ ಬಿರುಗಾಳಿ ಸಹಿತ ಮಳೆಯಾಗಲಿದೆ. ಚಂಡ ಮಾರುತದ ಹಿನ್ನೆಲೆಯಲ್ಲಿ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ ಮತ್ತು ಎಂಟು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಎಚ್ಚರಿಕೆಯನ್ನು ರವಾನಿಸಲಾಗಿದೆ. |