ಆಂಜನೇಯ ದೇವರ ಫೋಟೋ ಎಸೆದು ಸೆಲ್ಫಿ:ಮೂವರ ಬಂಧನ

ಉಡುಪಿ: ದೊಡ್ಡಣಗುಡ್ಡೆ ಜನತಾ ವ್ಯಾಯಾಮ ಶಾಲೆಯಲ್ಲಿ ನಿನ್ನೆ ರಾತ್ರಿ ಆಂಜನೇಯ ದೇವರ ಫೋಟೋ ಎಸೆದು ಸೆಲ್ಫಿ ತೆಗೆದು ಘಟನೆಗೆ ಸಂಬಂಧಿಸಿ ಇಬ್ಬರು ಅಪ್ರಾಪ್ತ ಯುವಕರು ಸಹಿತ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.ಇನ್ನೋರ್ವ ಆರೋಪಿ ತಲೆ ಮರೆಸಿಕೊಂಡಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಘಟನೆಯ ವಿವರ: ಪ್ರತಿ ಗುರುವಾರ ಸಂಜೆ ದೊಡ್ಡಣಗುಡ್ಡೆ ಜನತಾ ವ್ಯಾಯಾಮ ಶಾಲೆಯಲ್ಲಿರುವ ಆಂಜನೇಯ ದೇವರಿಗೆ ಪೂಜೆ ನಡೆಸಿಕೊಂಡು ಬರಲಾಗುತ್ತಿದ್ದು, ನಿನ್ನೆ ಕೂಡ 6.30ರ ಸುಮಾರಿಗೆ ಪೂಜೆಗೆ ತಯಾರಿ ನಡೆಸುತ್ತಿದ್ದ ವೇಳೆ ಬಂದ ನಾಲ್ವರು ಅನ್ಯ ಕೋಮಿನ ಯುವಕರ ತಂಡ ಪೀಠದಲ್ಲಿದ್ದ ಆಂಜನೇಯ ದೇವರ ಫೋಟೊವನ್ನು ತೆಗೆದು ಅಲ್ಲಿಗೆ ತಾವು ಧರಿಸಿದ್ದ ಬನಿಯನ್ ಅನ್ನು ಹಾಕಿದ್ದಾರೆ ಎನ್ನಲಾಗಿದೆ. ನಂತರ ಈ ಸ್ಥಳದಲ್ಲಿ ತಮ್ಮ ದೇಹಧಾಡ್ಯ ಪ್ರದರ್ಶಿಸಿ, ಸೆಲ್ಫಿ ತೆಗೆದು ದೇವರ ಅವಹೇಳನ ಮಾಡಿದ್ದಾರೆಂದು ಸ್ಥಳೀಯರು ಆರೋಪಿಸಿದ್ದಾರೆ. ಇದನ್ನು ತಡೆಯಲು ಬಂದ ಸ್ಥಳೀಯ ಯುವಕರಿಗೆ ಬೆದರಿಸಿ, ದೇಹಧಾಡ್ಯ ತರಬೇತಿಗೆ ಬಳಸುವ ಪರಿಕರಗಳಿಂದ ಹಲ್ಲೆ ನಡೆಸಿದ್ದಾರೆ. ಹಾಗೆಯೇ ಅಲ್ಲೇ ಇದ್ದ ತೆಂಗಿನಕಾಯಿ ಒಡೆಯುವ ಕಲ್ಲನ್ನು ಹೊರಗೆ ಎಸೆದು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ವ್ಯಾಯಾಮ ಶಾಲೆಯ ಅಧ್ಯಕ್ಷ ರಾಮದಾಸ್ ಶೆಟ್ಟಿ ದೂರಿದ್ದಾರೆ. 

ಸ್ಥಳಕ್ಕೆ ಎಸ್ಪಿ ಭೇಟಿ: ಘಟನೆಯ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಎಸ್ಪಿ ನಿಶಾ ಜೇಮ್ಸ್ ಅವರು ಪರಿಸ್ಥಿತಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಘಟನಾ ಸ್ಥಳದ ಸುತ್ತ ಬಿಗಿಪೊಲೀಸ್ ಬಂದೋಬಸ್ತ್ ಕೈಗೊಳ್ಳುವ ಮೂಲಕ ಯಾವುದೇ ಕೋಮು ಸಂಘರ್ಷಕ್ಕೆ ಎಡೆಮಾಡಿಕೊಡದೆ ಪ್ರಕರಣವನ್ನು ತಿಳಿಗೊಳಿಸಿದ್ದಾರೆ.  ಪೊಲೀಸ್ ಬಂದೋಬಸ್ತು ಮುಂದುವರಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!