ಪೇಜಾವರ ನಿಧನ ಹಿನ್ನೆಲೆ ರಾಜ್ಯದಲ್ಲಿ ಮೂರು ದಿನಗಳ ಶೋಕಾಚರಣೆ – ಮುಖ್ಯಮಂತ್ರಿ
ಉಡುಪಿ – ತೀರ್ಥ ಸ್ವಾಮೀಜಿ ನಿಧನ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮೂರು ದಿನಗಳ ಶೋಕಾಚರಣೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ಮಾಡಲಾಗುವುದು ಎಂದರು. ತಮ್ಮ ಮತ್ತು ಸ್ವಾಮೀಜಿ ಒಡನಾಟ ನೆನಪಿಸಿಕೊಂಡು ಭಾವುಕರಾದ ಯಡಿಯೂರಪ್ಪ, ‘ನಾನು ಸ್ವಾಮೀಜಿ ಜೊತೆಗೆ ಕಳೆದ 50 ವರ್ಷಗಳಿಂದ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದೆ. ಅವರು ಅಯೋಧ್ಯೆಯಲ್ಲಿ ರಾಮನ ವಿಗ್ರಹ ಪ್ರತಿಷ್ಠಾಪನೆಗೆ ಹೋದಾಗ ಅವರ ಜೊತೆಗೆ ನಾನೂ ಇದ್ದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗಬೇಕು ಎಂಬ ಕನಸು ಅವರದ್ದಾಗಿತ್ತು. ಈಗ ಸುಪ್ರೀಂ ಕೋರ್ಟ್ ಸಹ ಅದೇ ತೀರ್ಪು ನೀಡಿದೆ. ಆದರೆ ರಾಮಮಂದಿರ ನೋಡಲು ಅವರಿಗೆ ಆಗಲಿಲ್ಲ’ ಎಂದು ಹೇಳಿದರು.
‘ನಮ್ಮ ದೇಶದ ಇತಿಹಾಸದಲ್ಲಿ ಯಾವುದೇ ಸ್ವಾಮೀಜಿ ಹೀಗೆ ದೇಶದ ಉದ್ದಗಲಕ್ಕೆ ಪ್ರವಾಸ ಮಾಡಿದ್ದು ನಾನು ನೋಡಿಲ್ಲ. ಆಸ್ಪತ್ರೆ ಸೇರುವ ಎರಡು ದಿನ ಹಿಂದೆಯೂ ಪ್ರವಾಸ ಮಾಡಿದ್ದರು. ಇಂಥ ಅಪರೂಪದ ಯತಿವರೇಣ್ಯ ಸಿಗುವುದು ಕಷ್ಟ. ಅಂಥ ಮಹಾನ್ ಪೂಜ್ಯರನ್ನು ಕಳೆದುಕೊಂಡು ದೇಶ ಬಡವಾಗಿದೆ’ ಎಂದು ವಿಷಾದಿಸಿದರು