ರಾಜ್ಯದಲ್ಲಿ ದೃಷ್ಟಿ ನೀತಿ ಸಮಿತಿ ರಚಿಸಲು ಚಿಂತನೆ- ಶ್ರೀರಾಮುಲು

ಉಡುಪಿ: ರಾಜ್ಯದಲ್ಲಿ ದೃಷ್ಟಿ ನೀತಿ ಸಮಿತಿ ರಚಿಸಲು ಈಗಾಗಲೇ ಚಿಂತನೆ ನಡೆಸಲಾಗಿದ್ದು,ಅದರ ಮೂಲಕ ಎಲ್ಲ ಜಿಲ್ಲೆಗಳಲ್ಲಿ ಉಚಿತ ನೇತ್ರ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರಗಳನ್ನು ನಡೆಸಿ ಪ್ರತಿಯೊಬ್ಬರಿಗೂ ದೃಷ್ಠಿ ನೀಡುವ ಕೆಲಸ ಮಾಡಲಾಗುವುದು ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದರು.
ಪರಿವಾರ ಸಮುದಾಯ ಅಭಿವೃದ್ಧಿ ಟ್ರಸ್ಟ್‌, ಉಡುಪಿ ಪ್ರಸಾದ್‌ ನೇತ್ರಾಲಯ ಸೂಪರ್‌
ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ನೇತ್ರಜ್ಯೋತಿ ಚಾರಿಟೇಬಲ್‌ ಟ್ರಸ್ಟ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಗರದ ಪ್ರಸಾದ್‌ ನೇತ್ರಾಲಯದಲ್ಲಿ ಶನಿವಾರ ಆಯೋಜಿಸಿದ ಉಚಿತ ನೇತ್ರ ತಪಾಸಣಾ ಮತ್ತು ಶಸ್ತ್ರಚಿಕಿತ್ಸಾ ಶಿಬಿರದ ಉಚಿತ ಕನ್ನಡಕ ವಿತರಣೆ ಮತ್ತು ನೇತ್ರದಾನ ನೋಂದಣಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮುಂದಿನ ದಿನಗಳಲ್ಲಿ ಬಡವರ ಆರೋಗ್ಯವನ್ನು ಸುಧಾರಣೆ ಮಾಡುವ
ನಿಟ್ಟಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಇಡೀ ರಾಜ್ಯದಲ್ಲಿ ವಿವಿಧ ಆರೋಗ್ಯ ಸೇವೆಗಳನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು. ಪ್ರಸಾದ್‌ ನೇತ್ರಾಲಯವು ವಿವಿಧ ಕಡೆಗಳಲ್ಲಿ ಉಚಿತ ಕಣ್ಣಿನ ತಪಾಸಣೆ ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ಬಡವರಿಗೆ ದೃಷ್ಟಿ ಕೊಡುವ ಕೆಲಸ ಮಾಡುತ್ತಿದೆ. ಅದರಂತೆ ರಾಜ್ಯದಲ್ಲಿರುವ ಖಾಸಗಿ ಆಸ್ಪತ್ರೆಗಳು ಉಚಿತ ಶಿಬಿರಗಳನ್ನು ಹಮ್ಮಿಕೊಂಡು ಬಡವರಿಗೆ ನೆರವಾಗಬೇಕು ಎಂದರು.


ಉಡುಪಿ ಶಾಸಕ ಕೆ. ರಘುಪತಿ ಭಟ್‌ ಮಾತನಾಡಿ, ಆರೋಗ್ಯ ಕರ್ನಾಟಕ ಮತ್ತು ಆಯುಷ್ಮಾನ್‌ ಯೋಜನೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯಲು ಖಾಸಗಿ ಆಸ್ಪತ್ರೆಗಳಿಗೆ ತೆರಳಬೇಕಾದರೆ ಸರ್ಕಾರಿ ಆಸ್ಪತ್ರೆಯ ಶಿಫಾರಸು ಪತ್ರ ಪಡೆಯುವುದು ಕಡ್ಡಾಯ ಮಾಡಲಾಗಿತ್ತು. ಇದರಿಂದ ಬಡವರು ತುಂಬಾ ತೊಂದರೆ ಅನುಭವಿಸುತ್ತಿದ್ದರು. ಹಾಗಾಗಿ ಆರೋಗ್ಯ ಸಚಿವರು ಶಿಫಾರಸು ಪತ್ರ ಪಡೆಯುವುದನ್ನು ರದ್ದು ಮಾಡಲು ಕ್ರಮಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ ಎಂದರು.


ಪ್ರತಿ ಪಂಚಾಯ್ತಿ ಹಾಗೂ ವಾರ್ಡ್‌ಗಳಲ್ಲಿ ಪ್ರತಿ ಭಾನುವಾರ ಉಚಿತ ಕಣ್ಣಿನ ತಪಾಸಣೆ
ಶಿಬಿರವನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು. ಜಿ ಪಂ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಪ್ರವರ್ತಕ ಜಿ. ಶಂಕರ್‌, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ) ಸಹಕುಲಾಧಿಪತಿ ಡಾ. ಎಚ್‌.ಎಸ್‌ ಬಲ್ಲಾಳ್‌, ತಾಪಂ ಸದಸ್ಯೆ ನಳಿನಿಪ್ರದೀಪ್‌ ಕುಮಾರ್‌, ಉದ್ಯಮಿ ಸುರೇಶ್‌ ಶೆಟ್ಟಿ ಗುರ್ಮೆ, ಧರ್ಮಪ್ರಸಾದ್‌ ರೈ, ಕೆ. ರಾಘುರಾಮ್‌ ರಾವ್‌, ಹರೀಶ್‌ ಶೆಟ್ಟಿ ಚೇರ್ಕಾಡಿ ಮೊದಲಾದವರು ಉಪಸ್ಥಿತರಿದ್ದರು.
ಪ್ರಸಾದ್‌ ನೇತ್ರಾಲಯದ ವೈದ್ಯಕೀಯ ನಿರ್ದೇಶಕ ಡಾ. ಕೆ. ಕೃಷ್ಣಪ್ರಸಾದ್‌ ಸ್ವಾಗತಿಸಿ,
ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಬಾಲಕೃಷ್ಣ ಮುದ್ದೋಡಿ ಕಾರ್ಯಕ್ರಮ
ನಿರೂಪಿಸಿದರು. ಆಸ್ಪತ್ರೆಯ ಆಡಳಿತಾಧಿಕಾರಿ ಎಂ.ವಿ. ಆಚಾರ್ಯ ವಂದಿಸಿದರು  

Leave a Reply

Your email address will not be published. Required fields are marked *

error: Content is protected !!