ಆಡಳಿತ ನಡೆಸಲು ಬಾರದವರು ಹೀಗೆಯೆ ಹೇಳುವುದು:ಸಿದ್ದರಾಮಯ್ಯ ತಿರುಗೇಟು

ಮೈಸೂರು: ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ತಮ್ಮನ್ನು ಶತ್ರುವಿನಂತೆ ನೋಡಿದ್ದೆ ಸಮಸ್ಯೆ ಆಗಿದ್ದು. ತಮ್ಮನ್ನು ಮಿತ್ರನಂತೆ ಅಥವಾ ಮೈತ್ರಿ ಪಕ್ಷದವರಂತೆ ನೋಡಿದಿದ್ದರೆ ಏನೂ ಆಗುತ್ತಿರಲಿಲ್ಲ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಹೆಚ್.ಡಿ. ಕುಮಾರಸ್ವಾಮಿ ವೆಬ್ ಸೈಟ್ ವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ, ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ನನ್ನ ಮೊದಲ ವಿರೋಧಿ ಭಾರತೀಯ ಜನತಾ ಪಕ್ಷವಲ್ಲ, ಕಾಂಗ್ರೆಸ್ ಶಾಸಕಾಂಗಪಕ್ಷದ ನಾಯಕ ಸಿದ್ದರಾಮಯ್ಯ. ತಮ್ಮ ನೇತೃತ್ವದ ಮೈತ್ರಿ ಸರ್ಕಾರ ಸಿದ್ದರಾಮಯ್ಯ ಅವರಿಗೆ ಇಷ್ಟ ಇರಲಿಲ್ಲ. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ನಮ್ಮ ತಂದೆ ಮಾಜಿ ಪ್ರಧಾನಿ ದೇವೇಗೌಡರ ಸೋಲಿಗೆ ಅವರು ಕಾರಣರಾದರು. ತಮ್ಮ ಆಪ್ತ ಶಾಸಕರ ಮೂಲಕ ಸರ್ಕಾರಕ್ಕೆ ಕಿರುಕುಳ ನೀಡಿದರು. ದೋಸ್ತಿ ಸರ್ಕಾರ ಬೀಳಲು ಸಿದ್ದರಾಮಯ್ಯ ನೇರ ಕಾರಣ ಎಂದು ಕೆಂಡಕಾರಿದ್ದರು.

ಈ ಹೇಳಿಕೆಗೆ, ಮೈಸೂರಿನಲ್ಲಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಕುಮಾರಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಅವರು ತನ್ನನ್ನು ಶತ್ರು ಎಂದು ಕೊಂಡು ದ್ವೇಷ ಸಾಧಿಸುತ್ತಲೇ ಬಂದರು. ಪ್ರೀತಿಯಿಂದ ನೋಡಿ, ಸ್ನೇಹಿತನಂತೆ ಕಂಡಿದ್ದರೆ ಏನೂ ಆಗುತ್ತಿರಲಿಲ್ಲ. ಕನಿಷ್ಠ ಪಕ್ಷ ಮೈತ್ರಿ ಪಕ್ಷದ ನಾಯಕನಂತೆಯೂ ತಮ್ಮನ್ನು ನಡೆಸಿಕೊಳ್ಳಲಿಲ್ಲ ಹಾಗಾಗಿ ಇಷ್ಟೆಲ್ಲಾ ಸಮಸ್ಯೆ ಆದವು ಎಂದು ಹೇಳಿದ್ದಾರೆ.

ಅಧಿಕಾರ ನಡೆಸಲು ಬಾರದವರು ಹೀಗೆಯೇ ಹೇಳುವುದು. ಅದಕ್ಕೆ ನಾವೇನು ಮಾಡೋಕೆ ಆಗೊಲ್ಲ ಎಂದು ತಮ್ಮನ್ನು ಮೊದಲ ದರ್ಜೆ ಗುಮಾಸ್ತನ ರೀತಿ ನಡೆಸಿಕೊಂಡರು ಎಂಬ ಕುಮಾರಸ್ವಾಮಿ ಹೇಳಿಕೆಗೆ ಸಿದ್ದರಾಮಯ್ಯ ತೀಕ್ಷ್ಣ ತಿರುಗೇಟು ನೀಡಿದರು.

ಬಿಜೆಪಿ ಹೈಕಮಾಂಡ್‌ಗೆ ಯಡಿಯೂರಪ್ಪ ಒಲ್ಲದ ಶಿಶು. ಒಂದು ತಿಂಗಳಿನಿಂದ ರಾಜ್ಯದಲ್ಲಿ ಸರ್ಕಾರವೇ ಇಲ್ಲ. ಯಡಿಯೂರಪ್ಪ ದೆಹಲಿಯಿಂದ ಬೆಂಗಳೂರಿಗೆ, ಬೆಂಗಳೂರಿನಿಂದ ದೆಹಲಿಗೆ ಓಡಾಡುತ್ತಿದ್ದಾರೆ. ವಿಚಿತ್ರವೆಂದರೆ ಅಮಿತ್ ಷಾ ಯಡಿಯೂರಪ್ಪರನ್ನು ಭೇಟಿಯೂ ಮಾಡುತ್ತಿಲ್ಲ. ಸರ್ಕಾರ ನಡೆಸಲು ಸ್ವಾತಂತ್ರ್ಯವನ್ನು ನೀಡುತ್ತಿಲ್ಲ. ಬಿಜೆಪಿ ಸರ್ವಾಧಿಕಾರದ ಆಡಳಿತದಲ್ಲಿ ನಂಬಿಕೆ ಜಾಸ್ತಿ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಯಡಿಯೂರಪ್ಪ ಆಡಳಿತವನ್ನು ಬಿಜೆಪಿ ಹೈಕಮಾಂಡ್ ತನ್ನ ಕೈಹಿಡಿತದಲ್ಲಿ ಇಟ್ಟುಕೊಂಡಿದೆ ಎಂದು ಅವರು ದೂರಿದ್ದಾರೆ.

ರಾಜ್ಯದಲ್ಲಿ ತೀವ್ರ ನೆರೆ, ಬರ ಇದ್ದರೂ ಕೇಂದ್ರ ಸರ್ಕಾರದಿಂದ ಒಂದು ರೂಪಾಯಿ ಕೂಡ ಮುಖ್ಯಮಂತ್ರಿ ರಾಜ್ಯಕ್ಕೆ ತರಲು ಸಾಧ್ಯವಾಗಲಿಲ್ಲ. ಇವರು ಸಚಿವರಿಗೆ ಖಾತೆ ಹಂಚಿಕೆಯನ್ನು ಮಾಡಲು ಸಾಧ್ಯವಾಗಲಿಲ್ಲ. ರಾಜ್ಯದ ಮತದಾರರು ಬಿಜೆಪಿಗೆ 113 ಬಹುಮತದ ಸಂಖ್ಯೆಯನ್ನು ನೀಡಿಲ್ಲ. ಹೈಕಮಾಂಡ್​ಗೂ ಯಡಿಯೂರಪ್ಪ ಬೇಕಾಗಿಲ್ಲ. ಇಬ್ಬರ ಮಧ್ಯೆ ತಿಕ್ಕಾಟದಲ್ಲಿ ರಾಜ್ಯದಲ್ಲಿ ಒಂದು ತಿಂಗಳಿನಿಂದ ಸರ್ಕಾರ ಇಲ್ಲದಂತಾಗಿದೆ ಎಂದು ಅವರು ವ್ಯಂಗ್ಯವಾಡಿದರು.

ಅನೈತಿಕವಾಗಿ ಬಿಜೆಪಿ ರಾಜ್ಯದಲ್ಲಿ ಸರ್ಕಾರ ರಚಿಸಿದ್ದು, ಅಸಂವಿಧಾನಾತ್ಮಕವಾಗಿ ಅಧಿಕಾರ ಹಿಡಿದಿದೆ. ಹಿಂಬಾಗಿಲಿನಿಂದ ಕುದುರೆ ವ್ಯಾಪಾರ ಮಾಡಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಅನರ್ಹ ಶಾಸಕರು, ಸಚಿವ ಸ್ಥಾನ ಸಿಗದ ಅತೃಪ್ತ ಶಾಸಕರು ಧಮ್ಕಿ ಹಾಕುತ್ತಿದ್ದಾರೆ. ಬಿಜೆಪಿಯಲ್ಲೂ ತುಂಬಾ ಜನ ಅತೃಪ್ತರಿದ್ದಾರೆ. ಆದ್ದರಿಂದಲೇ ಅವರಿಗೆ ಖಾತೆ ಹಂಚಿಕೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಲೇವಡಿ ಅವರು ಮಾಡಿದರು.

ಅನರ್ಹ ಶಾಸಕರು ಅತಂತ್ರರಾಗಿದ್ದಾರೆ ಎಂಬ ಪ್ರಶ‍್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅವರು ಅತಂತ್ರರಾಗಲಿ ಎಂದು ನಾವು ಶಾಸಕರನ್ನು ಅನರ್ಹಗೊಳಿಸುವಂತೆ ಮಾಡಿದ್ದು, ಅವರು ಅತಂತ್ರರಾಗಬೇಕು ಎನ್ನುವುದೇ ನಮ್ಮ ಆಶಯವಾಗಿತ್ತು ಎಂದು ಅವರು ಕಿಡಿಕಾರಿದರು

Leave a Reply

Your email address will not be published. Required fields are marked *

error: Content is protected !!