ಉಡುಪಿ: ಮಂಡ್ಯದ ಸೋಂಕಿತನಿಂದ 13 ಮಂದಿ ಕ್ವಾರೆಂಟೈನ್ಗೆ
ಉಡುಪಿ: ಮುಂಬಯಿನಿಂದ ಖರ್ಜೂರ ಸಾಗಾಟದ ವಾಹನದಲ್ಲಿ ಬಂದಿದ್ದ ಮಂಡ್ಯ ಮೂಲದ ಕೊರೊನಾ ಸೋಂಕಿತ ವ್ಯಕ್ತಿ ತೆಕ್ಕಟ್ಟೆಯ ಪೆಟ್ರೋಲ್ ಬಂಕ್ನಲ್ಲಿ ಸ್ನಾನ ಮಾಡಿದ್ದು ಮಾತ್ರವಲ್ಲದೇ ಹಲವು ಗಂಟೆಗಳ ಕಾಲ ಪೆಟ್ರೋಲ್ ಪಂಪ್ ಬಳಿ ಸುತ್ತಾಡಿದ್ದ ಸಿಸಿಟಿವಿ ದೃಶ್ಯಾವಳಿ ಪೊಲೀರಿಗೆ ದೊರಕಿದ್ದು, ಅದರ ಆದರದಲ್ಲಿ ತೆಕ್ಕಟ್ಟೆ ಪೆಟ್ರೋಲ್ ಪಂಪ್ ಮಾಲಿಕ ಸಹಿತ ಸದ್ಯ 7 ಮಂದಿಯನ್ನು ಮತ್ತು ಲಾರಿ ಸಾಗಾಟದ ವೇಳೆ ತಪಾಸಣೆ ಮತ್ತು ಅವರ ಜೊತೆಗಿದ್ದ ಸಾಸ್ತಾನ ಟೋಲ್ನ ಆರು ಮಂದಿಯನ್ನು ಕ್ವಾರೆಂಟೈನ್ಗೆ ಕಳಿಸಲಾಗಿದೆಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
ಸೋಂಕಿತನನ್ನು ಚಿಕಿತ್ಸೆಗೆ ಒಳಪಡಿಸಿ ಆತನ ಟ್ರಾವೆಲ್ ಹಿಸ್ಟರಿ ಪಡೆದಾಗ ತಾನು ಮುಂಬೈನಿಂದ ಲಾರಿಯಲ್ಲಿ ಆಗಮಿಸಿದ್ದು ಶಿರೂರು ಚೆಕ್ ಪೋಸ್ಟ್ನಿಂದ ಸಾಸ್ತಾನ ಚೆಕ್ ಪೋಸ್ಟ್ ಮಧ್ಯದಲ್ಲಿ ಬರುವ ಪೆಟ್ರೋಲ್ ಬಂಕ್ ವೊಂದರಲ್ಲಿ ಪೆಟ್ರೋಲ್ ಹಾಕಿ, ಅಲ್ಲಿಯೇ ಸ್ನಾನ ಮಾಡಿದ್ದಲ್ಲದೇ ರಾತ್ರಿ ತಂಗಿ ಮುಂಜಾನೆ ಅದೇ ಲಾರಿಯಲ್ಲಿ ಸಾಗಿರುವುದಾಗಿ ಆತ ಹೇಳಿಕೊಂಡಿದ್ದ. ಇದರಿಂದ ಈ ಪ್ರದೇಶಗಳಲ್ಲಿ ಬರುವ ಬಹುತೇಕ ಪೆಟ್ರೋಲ್ ಬಂಕ್ಗಳನ್ನು ತಪಾಸಣೆ ನಡೆಸಲಾಗಿತ್ತು. ಮೊದಲಿಗೆ ವ್ಯಕ್ತಿ ಹೇಳಿದಂತೆ ತ್ರಾಸಿ ಪೆಟ್ರೋಲ್ ಪಂಪ್ನಲ್ಲಿ ಸಿಸಿ ಕ್ಯಾಮೆರಾ ತಪಾಸಣೆ ಮಾಡಿದಾಗ ಅಲ್ಲಿ ಯಾವುದೇ ಕುರುಹು ಸಿಕ್ಕಿರಲಿಲ್ಲ. ಬಳಿಕ ಒಂದೆರಡು ಕಡೆ ತಪಾಸಣೆ ನಡೆಸಿದ್ದು ಈ ವೇಳೆ ತೆಕ್ಕಟ್ಟೆಯಲ್ಲಿರುವ ಪೆಟ್ರೋಲ್ ಬಂಕ್ ನಲ್ಲಿ ಲಾರಿ ಬಂದಿರುವುದು ಮತ್ತು ಅಲಿಯೇ ತಂಗಿರುವುದು, ಲಾರಿಯಲ್ಲಿ ಬಂದವರು ಸ್ನಾನ ಮಾಡಿರುವುದು ಅಲ್ಲಿನ ಸಿಸಿಟಿವಿ ಮೂಲಕ ದೃಢಪಟ್ಟಿದೆ. ಮೊದಲಿಗೆ ತ್ರಾಸಿ ಪೆಟ್ರೋಲ್ ಪಂಪ್ ಸೀಲ್ ಡೌನ್ ಎಂಬ ಮಾತುಗಳು ಆ ಭಾಗದ ಜನರಲ್ಲಿ ಆತಂಕ ಸೃಷ್ಟಿಸಿದ್ದು ಕೆಲ ಕಾಲ ಗೊಂದಲ ಉಂಟಾಗಿತ್ತು.
ತೆಕ್ಕಟ್ಟೆ ಪೆಟ್ರೋಲ್ ಬಂಕ್ ಬಂಕ್ಸೀಲ್ ಡೌನ್..
ತೆಕ್ಕಟ್ಟೆ ಪೆಟ್ರೋಲ್ ಬಂಕ್ ನಲ್ಲಿ ಸೋಂಕಿತ ವ್ಯಕ್ತಿ ಆತ ಸ್ನಾನ ಮಾಡಿರುವುದು ಖಚಿತವಾಗುತ್ತಿದ್ದಂತೆ, ಪೆಟ್ರೋಲ್ ಪಂಪ್ ಸೀಲ್ ಡೌನ್ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಪೆಟ್ರೋಲ್ ಬಂಕ್ ನ ಮಾಲಿಕ ಸೇರಿದಂತೆ ಒಟ್ಟು 7 ಮಂದಿ ಸಿಬಂದಿಯನ್ನು ಕ್ವಾರಂಟೈನ್ ಮಾಡಲಾಗಿದ್ದು ಉಳಿದ ನಾಲ್ವರನ್ನು ನಾಳೆ ಉಡುಪಿಯ ಐಸೋಲೇಶನ್ ವಾರ್ಡಿಗೆ ಕಳುಹಿಸಲಾಗುತ್ತದೆ. ಆರೋಗ್ಯ ಇಲಾಖೆಯ ತೀವ್ರವಾದ ಕಣ್ಗಾವಲು ತೆಕ್ಕಟ್ಟೆ ಪ್ರದೇಶಕ್ಕೆ ಇಡಲಾಗಿದೆ.
ಆರು ಮಂದಿ ಟೋಲ್ ಸಿಬ್ಬಂದಿಗೆ ಕ್ವಾರೆಂಟೈನ್?
ತೆಕ್ಕಟ್ಟೆಯಿಂದ ಮುಂಜಾನೆ ಹೊರಟ ಲಾರಿಯು ಎ.೨೨ ಬೆಳಿಗ್ಗೆ ೩.೩೮ ರ ಸುಮಾರಿಗೆ ಸಾಸ್ತಾನ ಟೋಲ್ ಫ್ಲಾಜಾ ದಾಟಿತ್ತು. ಈ ವೇಳೆ ಪಾಸ್ಟ್ ಟ್ಯಾಗ್ ಸರಿಪಡಿಸಿ ಟೋಲ್ ಪಡೆಯಲು ಅಂದು ಕರ್ತವ್ಯದಲ್ಲಿದ್ದ ಟೋಲ್ ಸಿಬ್ಬಂದಿಗಳು ಮತ್ತು ಅವರ ಸಹವರ್ತಿಗಳಾದ ಆರು ಮಂದಿಯನ್ನು ಕೂಡ ಕ್ವಾರೆಂಟೈನ್ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.
ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ. ನಾಗಭೂಷಣ ಉಡುಪ, ಬೈಂದೂರು ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ. ಪ್ರೇಮಾನಂದ ಹಾಗೂ ಕೋಟ ಪಿಎಸ್ಐ ನಿತ್ಯಾನಂದ ಗೌಡ ಹಾಗೂ ಸಿಬ್ಬಂದಿಗಳು ತಡರಾತ್ರಿಯವರೆಗೂ ತೆಕ್ಕಟ್ಟೆಯಲ್ಲಿದ್ದು ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ರಾತ್ರಿಯೇ ಹಲವರನ್ನು ಕ್ವಾರೆಂಟೈನ್ಗೆ ಆಗಲು ಸೂಚಿಸಿದ್ದಾರೆ.
ಒಟ್ಟಾರೆ ಇನ್ನೇನು ಉಡುಪಿ ಜಿಲ್ಲೆಗೆ ಗ್ರೀನ್ ಝೋನ್ ವಲಯ ಪ್ರಕಟವಾಗುತ್ತದೆ ಎಂಬ ಸಂತಸದ ಸುದ್ಧಿಗೆ ಈತ ಟ್ರಾವೆಲ್ ಹಿಸ್ಟರಿ ಜಿಲ್ಲೆಯ ಜನರ ನಿದ್ದೆಗೆಡಿಸಿದೆ.