ನಾಳೆ ಕೇಂದ್ರದ ವಿರುದ್ಧ ಘೋಷಣೆ ಕೂಗಬೇಕಾಗ ಬಹುದು:ಖಾದರ್
ಮಂಗಳೂರು: ನನ್ನ ವಿರುದ್ಧ ಘೋಷಣೆ ಕೂಗಿದವರಿಗೆ ನಾಳೆ ಕೇಂದ್ರದ ವಿರುದ್ಧ ಘೋಷಣೆ ಕೂಗಬೇಕಾದ ಪರಿಸ್ಥಿತಿ ಬರಬಹುದು ಎಂದು ಶಾಸಕ ಯುಟಿ ಖಾದರ್ ವ್ಯಂಗ್ಯವಾಗಿ ತಿರುಗೇಟು ನೀಡಿದ್ದಾರೆ. ಪೌರತ್ವ ಜನಜಾಗೃತಿ ಸಮಾವೇಶದಲ್ಲಿ ಮಾಜಿ ಸಚಿವ ಯುಟಿ ಖಾದರ್ ಗೆ ಜೀವಬೆದರಿಕೆ ಬಂದಿದ್ದು, ಈ ಬೆದರಿಕೆಗೆ ಅವರು ಪ್ರತಿಕ್ರಿಯಿಸಿದ್ದಾರೆ. ಘೋಷಣೆ ಕೂಗಿದ ಯುವಕರಿಗೆ ಏನೂ ಗೊತ್ತಿಲ್ಲ ಎಂದೆನಿಸುತ್ತದೆ. ನನ್ನ ವಿರುದ್ಧ ಘೋಷಣೆ ಕೂಗಿದವರಿಗೆ ನಾಳೆ ಕೇಂದ್ರದ ವಿರುದ್ಧ ಘೋಷಣೆ ಕೂಗಬೇಕಾದ ಪರಿಸ್ಥಿತಿ ಬರಬಹುದು. ನಾವು ದೇಶವನ್ನು ಒಡೆಯುವವರಲ್ಲ, ದೇಶ ಕಟ್ಟುವವರು ಎಂದು ಹೇಳಿದರು. ನಾವು ಕೇಸ್ ಹಾಕಿ ಅವರನ್ನು ಜೈಲಿಗೆ ಹಾಕಬಹುದು. ಆದರೆ, ಘೋಷಣೆ ಕೂಗಿದವರ ಮನೆಯ ಪರಿಸ್ಥಿತಿ ಹೇಗಿದೆಯೋ ನನಗೆ ಗೊತ್ತಿಲ್ಲ. ಹೀಗಾಗಿ ಘೋಷಣೆ ಕೂಗಿದವರ ಮೇಲೆ ನನಗೆ ಕನಿಕರ ಇದೆ. ನನ್ನ ತಲೆ ತೆಗೆದ್ರೆ ಖುಷಿ ಸಿಗುವುದಾದ್ರೆ ನೀವು ಇದ್ದ ಕಡೆ ನಾನೇ ಬರುತ್ತೇನೆ. ತಲೆ ತೆಗೆಯಲು ಘೋಷಣೆ ಕೂಗಿದ ಯುವಕರು ಅವಸರ ಮಾಡಬೇಡಿ. ಘೋಷಣೆ ಕೂಗಿದ ಯುವಕರೇ, ನಿಮ್ಮ ಮನೆಯ ಪರಿಸ್ಥಿತಿ ಒಮ್ಮೆ ನೋಡಿ ಎಂದು ಹೇಳಿದರು. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ದದ ಹೋರಾಟವನ್ನು ಯಾರಿಗೂ ನಿಲ್ಲಿಸಕ್ಕಾಗಲ್ಲ. ಮೊದಲು ಕೇಂದ್ರ ಸರ್ಕಾರ ಗೊಂದಲಗಳನ್ನು ನಿವಾರಿಸಲಿ ಎಂದು ಮಾಜಿ ಸಚಿವ ಯುಟಿ ಖಾದರ್ ಹೇಳಿದ್ದಾರೆ. |