ಪೇಜಾವರಶ್ರೀಗಳ ಸೇವೆಗೆ ಸ್ಮಾರಕ ನಿರ್ಮಾಣದ ಅವಶ್ಯಕತೆ ಇದೆ: ವೀರೇಂದ್ರ ಹೆಗ್ಗಡೆ
ಉಡುಪಿ: ದೇಹ ಎಂಬ ಶಕ್ತಿಯನ್ನು ಬಳಸಿಕೊಂಡು ಹೇಗೆ ಯಶಸ್ವಿ ಜೀವನ ನಡೆಸಬಹುದು ಎಂಬುದನ್ನು ಪೇಜಾವರ ಶ್ರೀಗಳು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹೇಳಿದರು.
ಶನಿವಾರ ಕೃಷ್ಣಮಠದ ರಾಜಾಂಗ ಣದಲ್ಲಿ ಹಮ್ಮಿಕೊಂಡಿದ್ದ ಪೇಜಾವರ ಶ್ರೀಗಳ ಸ್ಮರಣೆ ಕಾರ್ಯಕ್ರ ಮದಲ್ಲಿ ಮಾತನಾಡಿದ ಅವರು, ‘ಪೇಜಾವರ ಶ್ರೀಗಳು ಒಂದು ಕ್ಷೇತ್ರಕ್ಕೆ ಸೀಮಿತರಾಗದೇ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಬಹಳಷ್ಟು ದುಡಿದಿದ್ದಾರೆ. ಅವರಿಂದ ದುಡಿಸಿಕೊಂಡವರು ದೇಶದಾದ್ಯಂತ ಲಕ್ಷಾಂತರ ಮಂದಿ ಇದ್ದಾರೆ’ ಎಂದು ಸ್ಮರಿಸಿದರು.
ಶ್ರೀಗಳು ಬದುಕಿನ ಕೊನೆಯ ಕ್ಷಣದವರೆಗೂ ಅವಿರತವಾಗಿ ದೇಶದ ಉದ್ದಗಲ ಸಂಚರಿಸಿ ಧಾರ್ಮಿಕ, ಸಾಮಾಜಿಕ ಕೆಲಸಗಳನ್ನು ಮಾಡಿದರು. ಆರೋಗ್ಯದ ಬಗ್ಗೆ ಕಾಳಜಿ ತೋರದೇ ಸಮಾಜದ ಆರೋಗ್ಯದ ಬಗ್ಗೆ ಸದಾ ಚಿಂತಿಸುತ್ತಿದ್ದರು. ಶ್ರೀಗಳ ಸೇವೆಗೆ ಪ್ರತಿಯಾಗಿ ಸ್ಮಾರಕವನ್ನು ನಿರ್ಮಾಣ ಮಾಡಬೇಕಾದ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.
ಪೇಜಾವರ ಶ್ರೀಗಳ ಜೀವನ ಸಂದೇಶವೇ ಅನುಕರಣೀಯ. ಶ್ರೀಗಳ ನೆನಪು ಸದಾ ಅಚ್ಚಳಿಯದೆ ಉಳಿಯು ವಂತಾಗಲು ಅವರ ಹಾದಿಯಲ್ಲಿ ಸಾಗಬೇಕಿದೆ ಎಂದು ವೀರೇಂದ್ರ ಹೆಗ್ಗಡೆ ಹೇಳಿದರು.
ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಮಾತನಾಡಿ, ಸಮಾಜದ ನಡುವೆ ಇದ್ದುಕೊಂಡು ದೇವರ ಸೇವೆಯನ್ನೂ ಮಾಡಬಹುದು ಎಂದು ವಿಶ್ವಕ್ಕೆ ತೋರಿಸಿದವರು ವಿಶ್ವೇಶತೀರ್ಥ ಶ್ರೀಗಳು ಎಂದರು. ಪರ್ಯಾಯದ ಅವಧಿಯಲ್ಲಿ ಪ್ರವಚನಕ್ಕೆ ಆಹ್ವಾನಿಸಿದಾಗಲೆಲ್ಲ ಪೇಜಾವರ ಶ್ರೀಗಳು ನಿರಾಕರಿಸುತ್ತಿದ್ದರು. ಆದರೆ, ಆನಾರೋಗ್ಯದ ನಡುವೆಯೂ ಶ್ರೀಗಳ ಜೀವನದ ಕೊನೆಯ ಪ್ರವಚನ ಕೇಳುವ ಭಾಗ್ಯವನ್ನು ದಯಪಾಲಿಸಿದರು. ಐದು ನಿಮಿಷ ಮಾತನಾಡುವುದಾಗಿ ಹೇಳಿ ಅರ್ಧಗಂಟೆ ಪ್ರವಚನ ನೀಡಿದರು. ಅಂದಿನ ಶ್ರೀಗಳ ಪ್ರವಚನ ಪ್ರತಿಯೊಬ್ಬರ ಮನಸ್ಸಿಗೆ ಇಳಿಯುವಷ್ಟು ಅದ್ಭುತವಾಗಿತ್ತು ಎಂದು ಸ್ಮರಿಸಿದರು.
ಶಾಸಕ ರಘುಪತಿ ಭಟ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು, ಮುಖಂಡರಾದ ವಿನಯಕುಮಾರ್ ಸೊರಕೆ, ಉದ್ಯಮಿ ಡಾ.ಜಿ.ಶಂಕರ್, ಮಾಹೆ ಸಹ ಕುಲಾಧಿಪತಿ ಎಚ್.ಎಸ್.ಬಲ್ಲಾಳ್, ಜೇರಿ ವಿನ್ಸೆಂಟ್ ಇದ್ದರು.