ಭಾರತದಲ್ಲಿ ಕೃಷಿಗೆ ಉತ್ತಮ ಭವಿಷ್ಯವಿದೆ: ಗೋಪಾಲಕೃಷ್ಣ ಸಾಮಗ
ಉಡುಪಿ: ರೈತರು ದೇಶದ ಸ್ವಾಭಿಮಾನದ ಸಂಕೇತ. ಭಾರತದಲ್ಲಿ ಶೇ. 58ರಷ್ಟು ಮಂದಿ
ಕೃಷಿಯನ್ನು ಅವಲಂಬಿಸಿಕೊಂಡು ಬದುಕು ನಡೆಸುತ್ತಿದ್ದಾರೆ. ಕೃಷಿಗೆ ಇನ್ನೂ ಉತ್ತಮ
ಭವಿಷ್ಯವಿದೆ. ಆದರೆ ಇಂದಿನ ಯುವಜನಾಂಗ ಮಾತ್ರ ಕೃಷಿಯಿಂದ ದೂರ ಸರಿಯುತ್ತಿದೆ ಎಂದು ಕರ್ಣಾಟಕ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಸಹಾಯಕ ಜನರಲ್ ಮ್ಯಾನೇಜರ್ ಬಿ.ಗೋಪಾಲಕೃಷ್ಣ ಸಾಮಗ ಹೇಳಿದರು .
ಉಡುಪಿ ಜಿಲ್ಲಾ ಕೃಷಿಕ ಸಂಘದ ಆಶ್ರಯದಲ್ಲಿ ಕುಂಜಿಬೆಟ್ಟು ಶಾರದಾ ಮಂಟಪದಲ್ಲಿ ಭಾನುವಾರ ನಡೆದ 24ನೇ ‘ರೈತ ಸಮಾವೇಶ–2020’ಅನ್ನು ಉದ್ಘಾಟಿಸಿ ಮಾತನಾಡಿದರು.
ಭಾರತವು ಜಾತಿಕ ಕೃಷಿ ಮಾರುಕಟ್ಟೆಯಲ್ಲಿ 6ನೇ ಸ್ಥಾನವನ್ನು ಪಡೆದುಕೊಂಡಿದ್ದು,
2019–20ನೇ ಸಾಲಿನಲ್ಲಿ 291 ಮಿಲಿಯನ್ ಟನ್ ಆಹಾರ ಉತ್ಪಾದನೆ ಗುರಿ ಹೊಂದಿದೆ.
92.60 ಮಿಲಿಯನ್ ಹೆಕ್ಟೇರ್ ಪ್ರದೇಶದಲ್ಲಿ ತಾರಿಫ್ ಬೆಳೆ ಬೆಳೆಸಲಿದೆ ಎಂದರು.
ಎಫ್‌ಡಿಎ (ವಿದೇಶಿ ಬಂಡವಾಳ) ಮೂಲಕ ಕ್ಷೇತ್ರಕ್ಕೆ 9.41 ಮಿಲಿಯನ್ ಯುಎಸ್ ಡಾಲರ್
ಬಂಡವಾಳ ಹರಿದು ಬಂದಿದೆ. ಕೃಷಿ ಸಾಲ ಮನ್ನಾದಲ್ಲಿ ರೈತರಿಗೆ ಅನ್ಯಾಯ ಆಗದಂತೆ ಸರ್ಕಾರ ಕಾಳಜಿ ವಹಿಸುತ್ತಿದೆ. ಬ್ಯಾಂಕ್‌ನ ಒಟ್ಟು ವಾರ್ಷಿಕ ಸಾಲದಲ್ಲಿ ಶೇ. 18ರಷ್ಟು ಕೃಷಿಗೆ ನೀಡಲಾಗುತ್ತಿದೆ. ದೇಶದಲ್ಲಿ ಬ್ಯಾಂಕ್‌ಗಳು ನೀಡುವ ಒಟ್ಟು 11.914 ಕೋಟಿ ಸಾಲದಲ್ಲಿ 1,248 ಕೋಟಿ ಸಾಲವನ್ನು ಕೃಷಿ ನೀಡಲಾಗುತ್ತಿದೆ ಎಂದು ಹೇಳಿದರು.
ಚಿಂತಕ ಮುನಿರಾಜ ರೆಂಜಾಳ ಮಾತನಾಡಿ, ಕೃಷಿ ಎನ್ನುವುದು ಉದ್ಯೋಗವಲ್ಲ, ಅದು ನಮ್ಮ ಬದುಕು. ಅದಕ್ಕೆ ಸಮಯದ ಮಿತಿ ಇಲ್ಲ. ಕೃಷಿಕರ ಬದುಕು ಬಹಳ ಅರ್ಥಪೂರ್ಣವಾದುದು ಎಂದರು.ಇಂದು ಯುಜನತೆ ವಾಕಿಂಗ್, ಮಡ್ಡ್ ಥೆರೆಪಿ, ಜಿಮ್ ಇದೆಲ್ಲವನ್ನು ಹಣಕೊಟ್ಟು ಪಡೆದುಕೊಳ್ಳುತ್ತಿದ್ದಾರೆ. ಆದರೆ ಕೃಷಿಕರು ಮಣ್ಣು ಹಾಗೂ ಪ್ರಕೃತಿಯ ಜತೆಗೆ ಅವಿನಾಭಾವ ಸಂಬಂಧ ಹೊಂದಿರುವುದರಿಂದ ಅವರಿಗೆ ಇದೆಲ್ಲವೂ ಉಚಿತವಾಗಿ ಸಿಗುತ್ತದೆ.
ಆರೋಗ್ಯ, ನೆಮ್ಮದಿಯನ್ನು ಓರ್ವ ಉತ್ತಮ ಕೃಷಿ ಮಾತ್ರ ಪಡೆಯಲು ಸಾಧ್ಯ. ದುಡಿಯುವುದರಿಂದ ಆರೋಗ್ಯ ಸಿಕ್ಕಿದರೆ, ಬೆಳೆದ ಉತ್ಪನ್ನಗಳಿಂದ ಆತನಿಗೆ ನೆಮ್ಮದಿ ದೊರೆಯುತ್ತದೆ ಎಂದು ಹೇಳಿದರು. ಕೃಷಿ ಸಂಸ್ಕೃತಿ ಮರೆಯಾಗುತ್ತಿದೆ
ಕೃಷಿಗೆ ಜಾತಿ, ಮತ, ಪಂಥದ ಬೇಧವಿಲ್ಲ. ಕೃಷಿ ಸಂಸ್ಕೃತಿ ಮರೆಯಾಗುತ್ತಿದ್ದು, ಅದನ್ನು
ಉಳಿಸಿಕೊಳ್ಳುವುದು ಇಂದಿನ ಅನಿವಾರ್ಯ. ಕೃಷಿಯಲ್ಲಿ ಆದಾಯ ತೊಂದರೆಯಂತಹ ಸಣ್ಣಪುಟ್ಟ ಸಮಸ್ಯೆಗಳಿವೆ. ಅದನ್ನು ಯಾವ ರೀತಿ ಬಗೆಹರಿಸಿಕೊಳ್ಳಬಹುದು ಎಂಬ ನಿಟ್ಟಿನಲ್ಲಿ ಚಿಂತನೆ ಮಾಡಬೇಕಾದ ಅಗತ್ಯವಿದೆ ಎಂದರು.
ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಅಧ್ಯಕ್ಷತೆ ವಹಿಸಿದ್ದರು. ರೋಟರಿ ಜಿಲ್ಲಾಧ್ಯಕ್ಷ ಮಂಜುನಾಥ ಉಪಾಧ್ಯ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪ್ರಗತಿಪರ ಕೃಷಿಕರಾದ ಪ್ರಸಾದ್ ಶೆಟ್ಟಿ ನಿಟ್ಟೂರು, ವೇಣುಗೋಪಾಲ
ಪಡುಕಳತ್ತೂರು, ಶಂಕರ ಕೋಟ್ಯಾನ್ ಪೆರಂಪಳ್ಳಿ, ರಘುಪತಿ ನಾಯ್ಕ್ ಕೆಳಾರ್ಕಳಬೆಟ್ಟು,
ಡೊರಿನಾ ಡಯಾಸ್ ಬಂಟಕಲ್ಲು ಅವರನ್ನು ಸನ್ಮಾನಿಸಲಾಯಿತು.
ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಭಟ್ ಕುದಿ ವಾರ್ಷಿಕ ವರದಿ ಮಂಡಿಸಿದರು,
ಉಪಾಧ್ಯಕ್ಷ ಶ್ರೀನಿವಾಸ ಬಲ್ಲಾಳ್ ಮಲ್ಲಂಪಳ್ಳಿ ಸ್ವಾಗತಿಸಿದರು. ಕಾರ್ಯದರ್ಶಿ
ರವೀಂದ್ರ ಪೂಜಾರಿ ಗುಜ್ಜರಬೆಟ್ಟು ಪ್ರಾಸ್ತಾವಿಕವಾಗಿ ಮಾತನಾಡಿದರು. ವೇಣುಗೋಪಾಲ
ಪಡುಕಳತ್ತೂರು ವಂದಿಸಿದರು.