ರಂಗ ಪ್ರಸಾಧನ ಶಿಬಿರ ಆರಂಭ
ಮಾಂಡ್ ಸೊಭಾಣ್ ಪ್ರವರ್ತಿತ ಕೊಂಕಣಿಯ ನಾಟಕ ರೆಪರ್ಟರಿ ಕಲಾಕುಲ್‌ನಿಂದ ಆಯೋಜಿಸಿದ ರಂಗ ಪ್ರಸಾಧನ ಮತ್ತು ಮುಖವರ್ಣಿಕೆ ಶಿಬಿರವು ಕಲಾಂಗಣದಲ್ಲಿ ನಡೆಯುತ್ತಿದೆ. ದಿನಂಪ್ರತಿ 6 ರಿಂದ 8:30 ವರೆಗೆ ತರಗತಿಗಳು ನಡೆಯಲಿದ್ದು ಶನಿವಾರ 29-06-2019 ರಂದು ಸಮಾರೋಪಗೊಳ್ಳಲಿದೆ.
ತರಬೇತುದಾರರಾಗಿ ಆಗಮಿಸಿದ ಪ್ರಖ್ಯಾತ ಪ್ರಸಾಧನ ತಜ್ಞ, ಚಲನಚಿತ್ರ ಹಾಗೂ ರಂಗಭೂಮಿ ನಟ ಪುರುಷೋತ್ತಮ ತಲವಾಟ ತಾನು ಪ್ರಸಾಧನ ಕ್ಷೇತ್ರಕ್ಕೆ ಬಂದ ಹಿನ್ನೆಲೆಯನ್ನು ವಿವರಿಸಿ, ತನ್ನ ಅನುಭವಗಳನ್ನು ಹಂಚಿಕೊಂಡರು. ಪ್ರಯತ್ನ ಹಾಗೂ ನಿರಂತರ ಅಭ್ಯಾಸದಿಂದ ಮಾತ್ರ ಕಲಿಕೆಯನ್ನು ಎತ್ತರಕ್ಕೊಯ್ಯಬಹುದು. ಈ ಮೇಕಪ್ ಅಂದರೆ ವಧು ಶೃಂಗಾರದಂತೆ ಅಲ್ಲ. ಇಲ್ಲಿ ಸುರೂಪವನ್ನು ಪಾತ್ರದ ಅಗತ್ಯಕ್ಕೆ ತಕ್ಕಂತೆ ಕುರೂಪಗೊಳಿಸಬಹುದು.
ಸಜ್ಜನರನ್ನು ದುರ್ಜನರನ್ನಾಗಿ, ಚಿತ್ರಿಸಬಹುದು. ಬಣ್ಣಗಳಿಗೂ ಚರಿತ್ರೆಯಿದೆ. ಹಿಂದೆಲ್ಲಾ ಹೊಟ್ಟು, ಎಲೆ, ಹಿಂಗಾರ, ಅಂಗಾರ ಇತ್ಯಾದಿಗಳಿಂದ ಬಣ್ಣಗಳ ತಯಾರಿ ನಡೆಯುತ್ತಿತ್ತು. ಇಂದು ರೆಡಿಮೇಡ್ ಬಣ್ಣಗಳು ದೊರೆಯುತ್ತವೆ. ಭಾವನೆಗಳಿಗೆ ತಕ್ಕಂತೆ ಬಣ್ಣಗಳಿವೆ. ನಟರಿಗೆ ಮುಖವರ್ಣಿಕೆ ಬಗ್ಗೆ ಗೊತ್ತಿರಬೇಕು. ಇವನ್ನೆಲ್ಲಾ ಅರಿತು, ಕಲಿತರೆ ಯಶಸ್ವಿಯಾಗಬಹುದು. ಈ ವಿದ್ಯೆ ಮುಂದುವರಿಯಬೇಕೆಂಬುದು ನನ್ನ ಇಚ್ಛೆ. ಹಾಗಾಗಿ ರಾಜ್ಯಾದ್ಯಂತ ಸಂಚರಿಸಿ ಆಸಕ್ತರಿಗೆ ಕಲಿಸುತ್ತಿದ್ದೇನೆ ಎಂದು ಹೇಳಿದರು.