ಉಗ್ರರಿಗೆ ಪೋಷಣೆ ನೀಡುವುದು ಯಾರೆಂದು ವಿಶ್ವಕ್ಕೆ ಗೊತ್ತಿದೆ: ಮೋದಿ
ಹ್ಯೂಸ್ಟನ್: ಸಂವಿಧಾನದ 370ನೇ ವಿಧಿಯಡಿ ಜಮ್ಮು– ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಅಧಿಕಾರವನ್ನು ರದ್ದುಪಡಿಸಿದ ಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದಲ್ಲಿರುವ ಅನಿವಾಸಿ ಭಾರತೀಯರ ಮುಂದೆ ಸಮರ್ಥಿಸಿಕೊಂಡರು.
ಇಲ್ಲಿನ ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ನೆರೆದಿದ್ದ 50 ಸಾವಿರಕ್ಕೂ ಹೆಚ್ಚು ಅನಿವಾಸಿ ಭಾರತೀಯರ ಸಮ್ಮುಖದಲ್ಲಿ ಈ ವಿಷಯ ಪ್ರಸ್ತಾಪಿಸಿದಾಗ ನೆರೆದಿದ್ದ ಜನರು ಕರತಾಡನದ ಮೂಲಕ ಪ್ರಧಾನಿಯನ್ನು ಅಭಿನಂದಿಸಿದರು.
370ನೇ ವಿಧಿಯು ಜಮ್ಮು–ಕಾಶ್ಮೀರ ಮತ್ತು ಲಡಾಖ್ ಜನರನ್ನು ವಿಕಾಸ ಮತ್ತು ಸಮಾನ ಅಧಿಕಾರದಿಂದ ವಂಚಿತರನ್ನಾಗಿಸಿತ್ತು. ಇದರಿಂದಾಗಿ ಆ ಭಾಗದಲ್ಲಿ ಭಯೋತ್ಪಾದಕರ ಮೇಲುಗೈ ಆಗಿತ್ತು. ಈ ವಿಧಿಯ ರದ್ದತಿಯಿಂದ ಅಲ್ಲಿನ ಜನರಿಗೆ ಅವಕಾಶಗಳು ತೆರೆದುಕೊಂಡಿವೆ. ಅಲ್ಲದೆ ಅಲ್ಲಿನ ಮಹಿಳೆಯರು, ಮಕ್ಕಳು, ದಲಿತರ ಮೇಲೆ ಆಗುತ್ತಿದ್ದ ತಾರತಮ್ಯ ಕೊನೆಯಾಗಲಿದೆ ಎಂದರು.
ದೇಶದ ಲೋಕಸಭೆ, ರಾಜ್ಯಸಭೆಯಲ್ಲಿ ಗಂಟೆಗಟ್ಟಲೆ ಈ ಕುರಿತು ಚರ್ಚೆ ನಡೆಯಿತು. ದೇಶ, ಜಗತ್ತಿನಾದ್ಯಂತ ವಾಹಿನಿಗಳಲ್ಲಿ ನೇರ ಪ್ರಸಾರವಾಯಿತು. ಮೇಲ್ಮನೆಯಲ್ಲಿ ನಮ್ಮ ಸರ್ಕಾರಕ್ಕೆ ಬಹುಮತ ಇಲ್ಲದಿದ್ದರೂ ಎರಡೂ ಮನೆಗಳಲ್ಲಿ 370ನೇ ವಿಧಿ ರದ್ದುಪಡಿಸುವ ಮಸೂದೆ ಬಹುಮತದಿಂದ ಅಂಗೀಕಾರವಾಯಿತು ಎಂದು ಅವರು ತಿಳಿಸಿದರು.
ಈ ಮೂಲಕ ದೇಶದಲ್ಲಿ 70 ವರ್ಷಗಳಿಂದ ಇದ್ದ ಕಾನೂನನ್ನು ಬೀಳ್ಕೊಟ್ಟೆವು. ಇದೇ ರೀತಿ ನಮ್ಮ ಸರ್ಕಾರ ಹಲವು ಹಳೆಯ ಕಾನೂನುಗಳಿಗೆ ಅಂತ್ಯ ಹಾಡಿದೆ ಎಂದರು.
ಈ ಕಾರ್ಯಕ್ಕಾಗಿ ದೇಶದ ಸಂಸದರಿಗೆ ಎದ್ದು ನಿಂತು ಗೌರವ ಸಲ್ಲಿಸುವಂತೆ ಮೋದಿ ಅವರು ಸೂಚಿಸಿದಾಗ, ಸಭಿಕರೆಲ್ಲ ಎದ್ದು ನಿಂತು ಚಪ್ಪಾಳೆ ತಟ್ಟಿ ಅಭಿನಂದಿಸಿದರು.
ಪಾಕ್ಗೆ ತಿವಿದ ಮೋದಿ: ಭಾರತದ ಈ ಕ್ರಮದಿಂದ ಕೆಲವರಿಗೆ ತೊಂದರೆಯಾಗಿದೆ. ತಮ್ಮ ದೇಶವನ್ನೇ ಸರಿಯಾಗಿ ನಿಭಾಯಿಸಲು ಆಗದವರು, ಭಾರತವನ್ನು ದ್ವೇಷಿಸುವುದನ್ನೇ ರಾಜನೀತಿ ಮಾಡಿಕೊಂಡಿದ್ದಾರೆ. ಅವರು ಭಯೋತ್ಪಾದನೆಯನ್ನು ಪೋಷಿಸಿ, ಬೆಳೆಸುತ್ತಾ ಜಗತ್ತಿಗೆ ಕಂಟಕವಾಗಿದ್ದಾರೆ. ಅವರು ಎಂಥವರು ಎಂಬುದು ಇಡೀ ಜಗತ್ತಿಗೇ ಗೊತ್ತಿದೆ ಎಂದು ಮೋದಿ ಪಾಕಿಸ್ತಾನದ ಹೆಸರೇಳದೆ ತಿವಿದರು.
ಅಮೆರಿಕದಲ್ಲಿ 9/11 ಮತ್ತು ಮುಂಬೈನಲ್ಲಿ 26/11 ರಂದು ನಡೆದ ಭಯೋತ್ಪಾದಕ ದಾಳಿಗಳಿಗೆ ಕಾರಣಕರ್ತರು ಯಾರು? ಅವರು ಎಲ್ಲಿದ್ದರು ಮತ್ತು ಎಲ್ಲಿದ್ದಾರೆ ಎಂಬುದು ಇಡೀ ವಿಶ್ವಕ್ಕೇ ಗೊತ್ತಿದೆ ಎಂದ ಅವರು, ಭಯೋತ್ಪಾದನೆ ಮತ್ತು ಅದನ್ನು ಪೋಷಿಸುವವರ ವಿರುದ್ಧ ನಿರ್ಣಾಯಕ ಹೋರಾಟ ಮಾಡಬೇಕಾದ ಅಗತ್ಯ ಹೆಚ್ಚಿದೆ ಎಂದು ಪ್ರತಿಪಾದಿಸಿದರು.
‘ಭಯೋತ್ಪಾದನೆ ಕೊನೆಗಾಣಿಸುವ ನಮ್ಮ ಈ ಹೋರಾಟಕ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಹಕಾರವೂ ಇದೆ. ಅವರೂ ನಮ್ಮನ್ನು ಬೆಂಬಲಿಸಿದ್ದಾರೆ. ಟ್ರಂಪ್ ಅವರ ಈ ನಿರ್ಧಾರಕ್ಕೆ ನಾವೆಲ್ಲರೂ ಎದ್ದು ನಿಂತು ಅಭಿನಂದಿಸೋಣ’ ಎಂದು ಪ್ರಧಾನಿ ಮೋದಿ ಹೇಳಿದಾಗ, ನೆರೆದಿದ್ದ ಸಭಿಕರೆಲ್ಲ ಎದ್ದು ನಿಂತು ಚಪ್ಪಾಳೆ ತಟ್ಟಿ ಅಭಿನಂದಿಸಿದರು. ‘ಅಬ್ ಕಿ ಬಾರ್ ಟ್ರಂಪ್ ಸರ್ಕಾರ್’ ಎಂಬ ಮಾತು ಸ್ಫುಟವಾಗಿ ಗಟ್ಟಿದನಿಯಲ್ಲಿ ಅನುರಣಿಸಿತು.
ಭಾರತದಲ್ಲಿ ಎಲ್ಲವೂ ಚೆನ್ನಾಗಿದೆ
ಭಾರತದಲ್ಲಿ ಎಲ್ಲವೂ ಚೆನ್ನಾಗಿದೆ ಎಂದು ಮೋದಿ ಅವರು ಹಿಂದಿ, ತೆಲುಗು, ಕನ್ನಡ ಸೇರಿದಂತೆ ವಿವಿಧ ಪ್ರಾದೇಶಿಕ ಭಾಷೆಗಳ ಮೂಲಕ ಅಲ್ಲಿ ನೆರೆದಿದ್ದ ಭಾರತೀಯರಿಗೆ ತಿಳಿಸಿದರು. ನಮ್ಮದೂ ಬಹು ಭಾಷಾ ದೇಶ. ಸಹ ಜೀವನದೊಂದಿಗೆ ದೇಶ ಮುಂದೆ ಸಾಗುತ್ತಿದೆ. ವಿವಿಧತೆಯಲ್ಲಿ ಏಕತೆ. ಇದೇ ನಮ್ಮ ಪ್ರಜಾಪ್ರಭುತ್ವದ ಶಕ್ತಿ ಮತ್ತು ಪ್ರೇರಣೆ. 2019ರ ಲೋಕಸಭಾ ಚುನಾವಣೆಯಲ್ಲಿ ಅಮೆರಿಕದಲ್ಲಿರುವ ಅನಿವಾಸಿ ಭಾರತೀಯರೂ ಶ್ರಮಿಸಿದ್ದೀರಿ. ಈ ಚುನಾವಣೆಯಲ್ಲಿ 61 ಕೋಟಿ ಜನರು ಮತ ಚಲಾಯಿಸಿದರು. ಇದು ಅಮೆರಿಕದ ಒಟ್ಟಾರೆ ಜನಸಂಖ್ಯೆಯ ಎರಡರಷ್ಟಾಗಿದೆ. 8 ಕೋಟಿ ಯುವ ಜನರು ಮೊದಲ ಬಾರಿ ಮತ ಚಲಾಯಿಸಿದರು. ದೇಶದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಹೆಚ್ಚು ಮಹಿಳೆಯರು ಈ ಬಾರಿ ಮತ ಚಲಾಯಿಸಿದರು. ಅಲ್ಲದೆ ಮಹಿಳಾ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದಾರೆ.2019ರ ಚುನಾವಣೆ ಮತ್ತೊಂದು ದಾಖಲೆ ಎಂದರೆ 6 ದಶಕಗಳ ನಂತರ ಪೂರ್ಣ ಬಹುಮತದೊಂದಿಗೆ ಎರಡನೇ ಅವಧಿಯಲ್ಲಿ, ಹಿಂದಿಗಿಂತಲೂ ಹೆಚ್ಚು ಸ್ಥಾನಗಳನ್ನು ಗೆದ್ದ ಸರ್ಕಾರ ನಮ್ಮದು.ಇಲ್ಲಿಂದ ದೊರೆತಿರುವ ಸಂದೇಶ ಹೊಸ ಸಂಭಾವ್ಯಗಳ ಹುಟ್ಟಿಗೆ ಕಾರಣವಾಗಲಿದೆ. ಎರಡೂ ದೇಶಗಳು ಹೊಸ ನಿರ್ಮಾಣದ ಸಂಕಲ್ಪದೊಂದಿಗೆ ಕನಸು– ಗುರಿ ಸಾಕಾರಗೊಳಿಸಲು ಶ್ರಮಿಸಲಿವೆ.
ಗಡಿ ಭದ್ರತೆ ಉಭಯ ದೇಶಗಳಿಗೆ ಮಹತ್ವದ್ದು: ಟ್ರಂಪ್
ಹ್ಯೂಸ್ಟನ್ : ಭಾರತ–ಅಮೆರಿಕ ಎರಡೂ ದೇಶಗಳಿಗೆ ಗಡಿ ಭದ್ರತೆ ಮಹತ್ವದ್ದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದರು.‘ನಮ್ಮ ಜನರನ್ನು ಸುರಕ್ಷಿತವಾಗಿ ಇರಿಸಿಕೊಳ್ಳಲು, ಗಡಿಗಳನ್ನು ರಕ್ಷಿಸಿಕೊಳ್ಳಬೇಕು ಎಂದು ಭಾರತ ಮತ್ತು ಅಮೆರಿಕಕ್ಕೆ ತಿಳಿದಿದೆ. ಮುಗ್ಧ ನಾಗರಿಕರನ್ನು ಇಸ್ಲಾಂ ಭಯೋತ್ಪಾದಕರಿಂದ ರಕ್ಷಿಸಿಕೊಳ್ಳಲು ಬದ್ಧರಾಗಿದ್ದೇವೆ’ ಎಂದರು.
ಮೋದಿ ಇದಕ್ಕೆ ಚಪ್ಪಾಳೆ ತಟ್ಟಿದರು…
‘ಉಭಯ ದೇಶಗಳ ರಕ್ಷಣಾ ಬಾಂಧವ್ಯವನ್ನು ಮತ್ತಷ್ಟು ಹೆಚ್ಚಿಸಲು ಶೀಘ್ರವೇ ಹಲವು ರಕ್ಷಣಾ ಒಪ್ಪಂದಗಳಿಗೆ ಸಹಿ ಹಾಕಲಾಗುವುದು’ ಎಂದು ಪ್ರಧಾನಿ ಮೋದಿ ಅವರ ಉಪಸ್ಥಿತಿಯಲ್ಲಿ ತಿಳಿಸಿದರು.ಆರ್ಥಿಕ ಸುಧಾರಣೆಗೆ ಪ್ರಶಂಸೆ: ಮೋದಿ ಅವರು ಕೈಗೊಂಡ ಆರ್ಥಿಕ ಸುಧಾರಣೆಗಳನ್ನು ಪ್ರಶಂಸಿಸಿದ ಟ್ರಂಪ್, ಇದರಿಂದ 30 ಲಕ್ಷ ಜನರನ್ನು ಬಡತನದಿಂದ ಹೊರತರಲಾಗಿದೆ ಎಂದರು.‘ಮೋದಿ ಶ್ರೇಷ್ಠ ವ್ಯಕ್ತಿ, ಶ್ರೇಷ್ಠ ನಾಯಕ ಹಾಗೂ ನನ್ನ ಸ್ನೇಹಿತ’ ಎಂದು ಬಣ್ಣಿಸಿದರು.‘ಭಾರತ–ಅಮೆರಿಕದ ಬಾಂಧವ್ಯದ ಎಲ್ಲ ವ್ಯಾಖ್ಯೆಗಳನ್ನು ಸಂಭ್ರಮಿಸಲು ನಾವಿಬ್ಬರೂ ಇಲ್ಲಿಗೆ ಬಂದಿದ್ದೇವೆ’ ಎಂದು ಹೇಳಿದರು