ದೇಶದ ಇತಿಹಾಸ ತಿರುಚುವ ಕೆಲಸ ಆಗಿದೆ: ಶೋಭಾ ಕರಂದ್ಲಾಜೆ
ಉಡುಪಿ: ಮಹಾತ್ಮ ಗಾಂಧೀಜಿ ಅವರದ್ದು ರಾಜಕೀಯ ಹೊರತಾದ ವ್ಯಕ್ತಿತ್ವ. ಆದರೆ
ಸ್ವಾತಂತ್ರ್ಯದ ನಂತರ ಅವರು ಒಂದು ಪಕ್ಷದ ಚಿಹ್ನೆಯ ಜೊತೆ ಸೀಮಿತರಾಗಿದ್ದರು.
ಆದ್ದರಿಂದ ಅವರನ್ನು ರಾಜಕೀಯ ಪಕ್ಷದ ಕಪಿಮುಷ್ಠಿಯಿಂದ ಹೊರತರಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು. ಮಹಾತ್ಮ ಗಾಂಧೀಜಿಯ 150ನೇ ಜನ್ಮದಿನಾಚರಣೆ ಪ್ರಯುಕ್ತ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಹಮ್ಮಿಕೊಂಡಿರುವ ‘ಗಾಂಧಿ ಸಂಕಲ್ಪ ಯಾತ್ರೆ’ಗೆ ಅಜ್ಜರಕಾಡಿನ ಭುಜಂಗ ಪಾರ್ಕ್‌ನಲ್ಲಿ ಗುರುವಾರ ಚಾಲನೆ ನೀಡಿ ಮಾತನಾಡಿದರು.
ಗಾಂಧೀಜಿ ನಮ್ಮ ದೇಶದ ನಿಜವಾದ ರಾಷ್ಟ್ರಪಿತ, ರಾಷ್ಟ್ರನಾಯಕ. ಅವರು ಸ್ವಾತಂತ್ರ್ಯ
ವಿಚಾರದ ಬಗ್ಗೆ ಮಾತ್ರ ಮಾತನಾಡಿಲ್ಲ. ಈ ದೇಶದ ಅನೇಕ ಪಿಡುಗುಗಳ ಬಗ್ಗೆ ಧ್ವನಿ
ಎತ್ತಿದ್ದಾರೆ. ಅಸ್ಪೃಶ್ಯತೆಯನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಹೋರಾಡಿದರು.
ಪರಿಶಿಷ್ಟ ಜಾತಿ ಮಾತ್ತು ಪಂಗಡಗಳ ನಡುವೆ ಭೇದಭಾವ ಇರಕೂಡದು. ದೇಶದ ಎಲ್ಲ ಜನರು ಸಮಾನತೆಯಿಂದ ಬದುಕಬೇಕೆಂಬ ಸಂದೇಶವನ್ನು ಸಾರಿದ್ದರು. ಅದು ಇಂದಿಗೂ ಪ್ರಸ್ತುತವಾಗಿದೆ ಎಂದರು.
ಮಹಾತ್ಮ ಗಾಂಧೀಜಿಯ 150ನೇ ಜನ್ಮದಿನಾಚರಣೆಯನ್ನು ಮುಂದಿನ ಒಂದು ವರ್ಷಗಳ ಕಾಲ ಆಚರಿಸಲು ಕೇಂದ್ರ ಸರ್ಕಾರ ಸಂಕಲ್ಪ ಮಾಡಿದೆ. ಅದರೊಂದಿಗೆ ದೇಶದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಪ್ಲಾಸ್ಟಿಕ್ ಮುಕ್ತ ದೇಶವನ್ನಾಗಿ ಮಾಡಬೇಕು. ಗಾಂಧಿ ತತ್ವಗಳಾದ ಸ್ವದೇಶಿ ವಸ್ತು ಬಳಕೆ, ಖಾದಿ ಬಟ್ಟೆ ಬಳಕೆ, ಗ್ರಾಮ ರಾಜ್ಯದಿಂದ ರಾಮರಾಜ್ಯ ಈ ವಿಚಾರಗಳಿಗೆ ಆದ್ಯತೆ ನೀಡಬೇಕೆಂಬ ತೀರ್ಮಾನ ಕೈಗೊಂಡಿದೆ ಎಂದು ಹೇಳಿದರು.
ಮುಜರಾಯಿ, ಮೀನುಗಾರಿಕೆ ಹಾಗೂ ಬಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿ ರಾಷ್ಟ್ರದ ಭದ್ರತೆ, ಐಕ್ಯತೆ ಹಾಗೂ ಸ್ವಚ್ಛತೆಯ ಸಂದೇಶ ಸಾರುವ ನಿಟ್ಟಿನಲ್ಲಿ ಗಾಂಧಿ ಸಂಕಲ್ಪ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಕಾಲ್ನಾಡಿಗೆ ಜಾಥಾದಲ್ಲಿ ಸಮಾಜದ ಎಲ್ಲ ವರ್ಗದವರು ಪಾಲ್ಗೊಳ್ಳುವುದರ ಮೂಲಕ ದೇಶದ ಐಕ್ಯತೆಗೆ ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದರು.
ಶಾಸಕ ಕೆ. ರಘುಪತಿ ಭಟ್, ಜಿಪಂ ಅಧ್ಯಕ್ಷ ದಿನಕರ ಬಾಬು, ಬಿಜೆಪಿ ಜಿಲ್ಲಾಧ್ಯಕ್ಷ
ಮಟ್ಟಾರು ರತ್ನಾಕರ ಹೆಗ್ಡೆ, ಕೆ. ಉದಯಕುಮಾರ್ ಶೆಟ್ಟಿ, ಗೀತಾಂಜಲಿ ಸುವರ್ಣ,
ಕುತ್ಯಾರು ನವೀನ್ ಶೆಟ್ಟಿ, ರಾಘವೇಂದ್ರ ಕಿಣಿ, ಸಂಧ್ಯಾ ರಮೇಶ್, ಕುಲಾಯಿ ಸುರೇಶ್
ನಾಯಕ್ ಮೊದಲಾದವರು ಉಪಸ್ಥಿತರಿದ್ದರು.
ಭುಜಂಗ ಪಾರ್ಕ್‌ನಲ್ಲಿ ಆರಂಭಗೊಂಡ ಪಾದಯಾತ್ರೆಯು ಜೋಡುಕಟ್ಟೆ, ಕೆ.ಎಂ. ಮಾರ್ಗ, ಸರ್ವಿಸ್ ಬಸ್ ನಿಲ್ದಾಣ ಗಾಂಧಿ ಪ್ರತಿಮೆಯ ಬಳಿ ಸಾಗಿ ಸಿಟಿ ಬಸ್ ನಿಲ್ದಾಣ,
ಕಲ್ಸಂಕ ಮಾರ್ಗವಾಗಿ ಶ್ರೀಕೃಷ್ಣಮಠದ ವಾಹನ ತಂಗುದಾಣದ ಬಳಿ ಮುಕ್ತಾಯಗೊಂಡಿತು. ಎರಡು ಸಾವಿರಕ್ಕೂ ಹೆಚ್ಚು ಶಾಲಾ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.