ಜನತಾ ಕರ್ಫ್ಯೂಗೆ ಇಡೀ ರಾಜ್ಯ ಸ್ತಬ್ಧ: ಎಲ್ಲೆಡೆ ಜನರಿಂದ ವ್ಯಾಪಕ ಬೆಂಬಲ
ಬೆಂಗಳೂರು: ಮಹಾಮಾರಿ ಕೊರೋನಾ ಸೋಂಕು ವಿರುದ್ಧ ದೇಶವ್ಯಾಪಿ ಬೃಹತ್ ಜನ ಜಾಗೃತಿಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕರೆ ನೀಡಿರುವ ಜನತಾ ಕರ್ಫ್ಯೂ ಆಂದೋಲನಕ್ಕ ಈಗಾಗಲೇ ರಾಜ್ಯದಾದ್ಯಂತ ವ್ಯಾಪಕ ಜನ ಬೆಂಬಲ ವ್ಯಕ್ತಪಡಿಸುತ್ತಿದ್ದು, ಭಾನುವಾರ ನಡೆಯುತ್ತಿರುವ ಜನತಾ ಕರ್ಫ್ಯೂ ಯಶಸ್ವಿಯಾಗುವುದು ಬಹುತೇಕ ಖಚಿತವಾಗುತ್ತಿದೆ.
ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳಾದ ಔಷಧ, ಹಾಲು, ಪತ್ರಿಕೆ, ಸರ್ಕಾರಿ ಆಸ್ಪತ್ರೆಗಳ ಸೇವೆಗಳು ಲಭ್ಯವಿರಲಿದ್ದು, ಪಟ್ರೋಲ್ ಬಂಕ್ ಗಳು ಎಂದಿನಿಂತೆ ಕಾರ್ಯನಿರ್ವಹಿಸುತ್ತಿವೆ. ಇವಿಷ್ಟು ಬಿಟ್ಟರೆ ರಾಜ್ಯದಲ್ಲಿ ಬೇರಾವುದೇ ಸೇವೆಗಳು ಲಭ್ಯವಿಲ್ಲ. ಎಲ್ಲಾ ರೀತಿಯ ಸಂಸ್ಥೆಗಳು ಹಾಗೂ ಸಂಘಟನೆಗಳು ಈ ಆಂದೋಲನಕ್ಕೆ ಸ್ವಯಂ ಪ್ರೇರಿತವಾಗಿ ಬೆಂಬಲ ವ್ಯಕ್ತರಪಡಿಸಿದ್ದು, ಇಡೀ ರಾಜ್ಯವೇ ಸ್ತಬ್ಧಗೊಂಡಿದೆ.
ಇನ್ನು ಭಾನುವಾರವಾಗಿರುವ ಹಿನ್ನೆಲೆಯಲ್ಲಿ ಯಾವುದೇ ಸರ್ಕಾರಿ ಕಚೇರಿಗಳೂ ಕೂಡ ಕಾರ್ಯನಿರ್ವಹಿಸುತ್ತಿಲ್ಲ. ಬಹುತೇಕ ಖಾಸಗಿ ಕೈಗಾರಿಕೆಗಳು, ಗಾರ್ಮೆಂಟ್ಸ್ ಸೇರಿದಂತೆ ಎಲ್ಲಾ ಕಾರ್ಖಾನೆಗಳೂ ಕೂಡ ಬಂದ್ ಆಗಿವೆ. ಖಾಸಗಿ ಆಸ್ಪತ್ರೆಗಳೂ ಆಂದೋಲನ ಬೆಂಬಲಿಸಿ ಒಪಿಡಿ ಬಂದ್ ಮಾಡುವುದಾಗಿ ಘೋಷಿಸಿವೆ. ಆದರೆ, ತುರ್ತುಸೇವೆಗಳು ಲಭ್ಯವಿರುತ್ತದೆ ಎಂದು ಭಾರತೀಯ ವೈದ್ಯ ಸಂಘದ ರಾಜ್ಯ ಘಟಕ ಮಾಹಿತಿ ನೀಡಿದೆ.
ಇನ್ನು ನಗರ ಹಾಗೂ ರಾಜ್ಯದ ಎಲ್ಲೆಡೆ ಕೆಎಸ್ಆರ್’ಟಿಸಿ, ಬಿಎಂಟಿಸಿ, ಮೆಟ್ರೋ ಸಂಚಾರ ಸಂಪೂರ್ಣವಾಗಿ ಬಂದ್ ಆಗಿವೆ. ಖಾಸಗಿ ಬಸ್ಸು,ಆಟೋ, ಟ್ಯಾಕ್ಸಿ, ಕ್ಯಾಬ್ ಮಾಲೀಕರು ಕರ್ಫೂಗೆ ಬೆಂಬಲ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ, ಖಾಸಗಿ ವಾಹನಗಳ ಸಂಚಾರಗಳೂ ಬಂದ್ ಆಗಿವೆ.
ಬೆಳಿಗ್ಗೆ 7 ಗಂಟೆಯವರೆಗೂ ವ್ಯಾಪಾರ ವಹಿವಾಟುಗಳನ್ನು ನಡೆಸಿದ್ದ ಕೆ.ಆರ್.ಮಾರುಕಟ್ಟೆ ಕೂಡ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ರಾಜ್ಯದಲ್ಲಿ ಅಗತ್ಯ ಸೇವೆಗಳನ್ನು ಹೊರತುಪಡಿಸಿದರೆ, ಬೇರೆಲ್ಲಾ ರೀತಿಯ ಸೇವೆಗಲೂ ಸಂಪೂರ್ಣ ಬಂದ್ ಆಗಿವೆ.
ಇದರಂತೆ ಶಾಲಾ, ಕಾಲೇಜುಗಳಿಗೆ ಸರ್ಕಾರವೇ ತಾತ್ಕಾಲಿಕ ಬಂದ್ ಮಾಡಿದೆ. ಪಬ್, ಬಾರ್ ಆ್ಯಂಡ್ ರೆಸ್ಟೋರೆಂಟ್, ಚಿತ್ರಮಂದಿರಗಳ ಮೇಲೆ ಈಗಾಗಲೇ ಸರ್ಕಾರ ತಾತ್ಕಾಲಿಕ ನಿರ್ಬಂಧ ಹೇರಿದೆ. ಇದರಿಂದ ಅವುಗಳು ಬಂದ್ ಆಗಿರಲಿವೆ. ಅಲ್ಲದೆ, ಬೆಂಗಳೂರಿನ ಕೆ.ಆರ್.ಮಾರುಕಟ್ಟೆ, ಯಶವಂತಪುರ ಎಪಿಎಂಸಿ ಸೇರಿದಂತೆ ಬಹುತೇಕ ಮಾಕುಟ್ಟೆಗಳ ಕಾರ್ಯ ಸ್ಥಗಿತಗೊಂಡಿವೆ. ಇನ್ನು ಬೀದಿ ಬದಿ ವ್ಯಾಪಾರಿಗಳು ಕೂಡ ಕರ್ಫ್ಯೂಗೆ ಬೆಂಬಲ ವ್ಯಕ್ತಪಡಿಸಿದ್ದು, ವ್ಯಾಪಾರ, ವಹಿವಾಟು ನಡೆಯುತ್ತಿರುವುದು ಕಂಡು ಬರುತ್ತಿಲ್ಲ.