ಸಾಮಾಜಿಕ ಜಾಲತಾಣದಲ್ಲಿ ತುಳುನಾಡ ಕಂಬಳ ಓಟಗಾರನದ್ದೇ ಸುದ್ದಿ!
ಮೂಡುಬಿದ್ರೆ: ಐಕಳದಲ್ಲಿ ನಡೆದ ಕಂಬಳ ಸ್ಪರ್ಧೆಯಲ್ಲಿ 145 ಮೀಟರ್ ದೂರವನ್ನು ಕೇವಲ 13.61 ಸೆಕೆಂಡ್‌ಗಳಲ್ಲಿ ಓಡಿ, ಕರಾವಳಿಯ ಉಸೇನ್ ಬೋಲ್ಟ್ ಎನಿಸಿಕೊಂಡ ಶ್ರೀನಿವಾಸ ಗೌಡ ಅವರದ್ದೇ ಸುದ್ಧಿ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಫೇಸ್‌ಬುಕ್, ವಾಟ್ಸ್‌ಆಪ್ ಸಹಿತ ಹೆಚ್ಚಿನ ಜಾಲತಾಣಗಳಲ್ಲಿ ಹಲವರು ಶ್ರೀನಿವಾಸ ಗೌಡರ ಕಂಬಳ ಓಟದ ವಿಡಿಯೊ ಹಂಚಿಕೊಂಡು ಅಭಿನಂದನೆಗಳ ಮಹಾ ಪೂರ ಹಾಕಿದ್ದಾರೆ. ಹೆಚ್ಚಿನ ಕಂಬಳ ಅಭಿಮಾನಿಗಳು ಉಸೇನ್ ಬೋಲ್ಟ್ ಹಾಗೂ ಶ್ರೀನಿವಾಸ ಅವರ ಫೋಟೊವನ್ನು ಹಾಕಿ, ನಮ್ಮೂರಿನ ಹೆಮ್ಮೆಯ ವೇಗದ ಕಂಬಳ ಓಟಗಾರ ಎಂದು ಬರೆದುಕೊಂಡು ಶುಭಹಾರೈಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶ್ರೀನಿವಾಸ ಗೌಡ, ಈಚೆಗೆ ಐಕಳದಲ್ಲಿ ನಡೆದ ನೇಗಿಲು ಹಿರಿಯ ವಿಭಾಗದ ಕಂಬಳ ಸ್ಪರ್ಧೆಯಲ್ಲಿ13.61 ಸೆಕೆಂಡ್
ಗಳಲ್ಲಿ ಗುರಿ ಮುಟ್ಟಿದ್ದೇನೆ. ಈ ಪಂದ್ಯದ ವಿಡಿಯೊ ನೋಡಿ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ . ಉಸೇನ್ ಬೋಲ್ಟ್ 100 ಮೀಟರ್ ಓಟವನ್ನು9.58 ಸೆಕೆಂಡ್‌ಗಳಲ್ಲಿ ಗುರಿಮುಟ್ಟಿ ವಿಶ್ವದಾಖಲೆ ಮಾಡಿದರೆ, ಶ್ರೀನಿವಾಸ ಗೌಡ 145 ಮೀಟರ್ ದೂರವನ್ನು 13.61 ಸೆಕೆಂಡ್‌ಗಳಲ್ಲಿ ಓಡಿದ್ದಾರೆ. ಇಬ್ಬರ ಓಟದ ಅವಧಿ ಲೆಕ್ಕಹಾಕಿದರೆ ಶ್ರೀನಿವಾಸ ಗೌಡ ಕಡಿಮೆ ( ೯.೫೫ ಸೆಕೆಂಡ್ ) ಸಮಯದಲ್ಲಿ ಗುರಿ ಮುಟ್ಟಿದ್ದಾರೆ ಎನ್ನುತ್ತಾರೆ ತೀರ್ಪುಗಾರರು.
ತಾಟೆ ಹಾಗೂ ಮೋಡ ಶ್ರೀನಿವಾಸ ಗೌಡ ಅವರಿಗೆ ಉಸೇನ್ ಬೋಲ್ಟ್ ಖ್ಯಾತಿ ತಂದುಕೊಟ್ಟ ಜೋಡಿ ಕೋಣಗಳು. ಈ ಕೋಣಗಳ ಮಾಲೀಕರು ಇರುವೈಲು ಪಾಣಿಲ ಬಾಡ ಪೂಜಾರಿ. ನನ್ನ ಸಾಧನೆಯ ಹಿಂದೆ ಕೋಣಗಳ ಶ್ರಮ ದೊಡ್ಡದು ಎಂದು ಶ್ರೀನಿವಾಸ ಗೌಡ ಹೇಳಿದರು.