ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ಬಡಗಬೆಟ್ಟು ಸೊಸೈಟಿ ಕಾರ್ಯ ಮಾದರಿ: ರಾಜೇಂದ್ರ ಕುಮಾರ್‌

ಉಡುಪಿ: ದೇಶದ ಅಭಿವೃದ್ಧಿ, ಆರ್ಥಿಕತೆಯಲ್ಲಿ ಸಹಕಾರಿ ಕ್ಷೇತ್ರದ ದೊಡ್ಡ ಕೊಡುಗೆ
ಇದ್ದು, ಸರ್ಕಾರಿ ಸೌಲಭ್ಯಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ಕೆಲಸ
ಮಾಡುತ್ತಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಹಾಗೂ ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ಅಧ್ಯಕ್ಷ ಡಾ. ಎಂ.ಎನ್‌. ರಾಜೇಂದ್ರ ಕುಮಾರ್‌ ಹೇಳಿದರು.

ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಭಾನುವಾರ ನಡೆದ ಬಡಗಬೆಟ್ಟು
ಕ್ರೆಡಿಟ್‌ ಕೋ-–ಆಪರೇಟಿವ್‌ ಸೊಸೈಟಿಯ ಶತಮಾನೋತ್ಸವ ಸಂಭ್ರಮಾಚರಣೆಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಹಕಾರಿ ಸಂಘಗಳು ಕೇವಲ ಒಂದೇ ದಿನದಲ್ಲಿ ಸಾಲ ಮಂಜೂರು ಮಾಡುವ ಮೂಲಕ ಬಡಜನರ ಕಷ್ಟಗಳನ್ನು ಪರಿಹರಿಸುತ್ತಿವೆ. ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ಬಡಗಬೆಟ್ಟು
ಸೊಸೈಟಿ ಮಾಡಿರುವ ಕಾರ್ಯ ಇತರೆ ಸೊಸೈಟಿಗಳಿಗೆ ಮಾದರಿಯಾಗಿದೆ. ನೂರು ಶತಮಾನಗಳನ್ನು ಪೂರೈಸಿರುವ ಈ ಸಂಸ್ಥೆಯೂ ಬ್ಯಾಂಕ್‌ ಆಗಿ ಪರಿವರ್ತನೆ ಆಗಬೇಕು. ಆ ಮೂಲಕ ಇನ್ನಷ್ಟು ಜನರ ಸೇವೆ ಮಾಡಬೇಕು ಎಂದರು.


ಮಂತ್ರಾಲಯ ಮಠದ ಸುಭುದೇಂದ್ರ ಸ್ವಾಮೀಜಿ ಮಾತನಾಡಿ, ನೂರು ವಸಂತಗಳನ್ನು ಕಂಡಿರುವ ಬಡಗಬೆಟ್ಟು ಸೊಸೈಟಿ ಜನರ ಮೆಚ್ಚುಗೆ ವಿಶ್ವಾಸ ಹೂಡಿಕೆಗೆ ವಿಶ್ವಾಸಾರ್ಹ
ಸಂಸ್ಥೆಯಾಗಿದೆ. ಹೂಡಿಕೆದಾರರಿಗೆ ಉತ್ತಮ ಫಲವನ್ನು ನೀಡುವುದರ ಜತೆಗೆ ಇನ್ನಷ್ಟು
ಬಡಜನರ ಸೇವೆ ಮಾಡುವ ಮೂಲಕ ಹೆಮ್ಮಾರವಾಗಿ ಬೆಳೆಯಲಿ ಎಂದು ಹಾರೈಸಿದರು.
ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಸ್ವಾಮೀಜಿ ಮಾತನಾಡಿ, ನೂರು ವರ್ಷಗಳನ್ನು
ಪೂರೈಸಿರುವ ಬಡಗಬೆಟ್ಟು ಸೊಸೈಟಿಯ ವಿಶ್ವಾಸಾರ್ಹತೆ ಮತ್ತಷ್ಟು ಹೆಚ್ಚಿದೆ. ಆರ್ಥಿಕ
ಸಂಸ್ಥೆಯ ಹಿಂದೆ ಗ್ರಾಹಕರ ನಂಬಿಕೆ, ಆಡಳಿತ ಮಂಡಳಿಯ ಪರಿಶ್ರಮವಿದೆ. ಉಡುಪಿಯ ಆರ್ಥಿಕಅಭಿವೃದ್ಧಿಗೆ ಸೊಸೈಟಿ ದೊಡ್ಡ ಕೊಡುಗೆ ನೀಡಿದೆ ಎಂದರು.


ಶಾಸಕ ಕೆ. ರಘುಪತಿ ಭಟ್‌ ಮಾತನಾಡಿ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರಿ
ಕ್ಷೇತ್ರಕ್ಕೆ ಆರ್ಥಿಕ ಬಲ ತುಂಬುವಲ್ಲಿ ಬಡಗಬೆಟ್ಟು ಸೊಸೈಟಿಯ ಪಾತ್ರ ಬಹಳಷ್ಟಿದೆ.
ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಪೈಪೋಟಿ ನೀಡುವ ಸಂಸ್ಥೆಯಾಗಿ ಬೆಳೆದು ನಿಂತಿದೆ
ಎಂದರು.ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಜೆರಾಲ್ಡ್‌ ಐಸಾಕ್‌ ಲೋಬೊ ಹಾಗೂ ಮಾಜಿ ಸಚಿವ ಅಮರನಾಥ ಶೆಟ್ಟಿ ಮಾತನಾಡಿದರು.


ಈ ಸಂದರ್ಭದಲ್ಲಿ ಅಕ್ಷರ ಸಂತ ಹರೆಕಳ ಹಾಜಬ್ಬ ಅವರನ್ನು ಸನ್ಮಾನಿಸಲಾಯಿತು.
ಉದ್ಯಮಿ ಮನೋಹರ ಶೆಟ್ಟಿ, ಸೊಸೈಟಿಯ ಶತಮಾನೋತ್ಸವ ಸಮಿತಿ ಸಂಚಾಲಕ ಪುರುಷೋತ್ತಮ ಪಿ.ಶೆಟ್ಟಿ, ಸಂಘದ ಉಪಾಧ್ಯಕ್ಷ ಎಲ್‌.ಉಮಾನಾಥ, ಮುಖ್ಯೋಪಾಧ್ಯಾಯ ಮುರಲಿ ಕಡೆಕಾರ್‌, ಲೆಕ್ಕಪರಿಶೋಧಕ ವಿಠಲ ಶೇರಿಗಾರ್‌ ಮೊದಲಾದವರು ಉಪಸ್ಥಿತರಿದ್ದರು. ಸೊಸೈಟಿಯ ಅಧ್ಯಕ್ಷ
ಸಂಜೀವ ಕಾಂಚನ್‌ ಸ್ವಾಗತಿಸಿದರು. ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ
ಪ್ರಾಸ್ತಾವಿಕವಾಗಿ ಮಾತನಾಡಿದರು. ಉಡುಪಿ ಶಾಖಾ ವ್ಯವಸ್ಥಾಪಕ ಪ್ರವೀಣ್‌ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!