ಕೊನೆಗೂ ಉದ್ಘಾಟನಾ ಭಾಗ್ಯ ಕಂಡ ‘ಪಂಪ್‌ವೆಲ್’ ಫ್ಲೈಓವರ್
ಮಂಗಳೂರು: ದಶಕದ ಹಿಂದೆ ಕಾಮಗಾರಿಗೆ ಚಾಲನೆ ನೀಡಲಾಗಿದ್ದ ಪಂಪ್‌ವೆಲ್ ಫ್ಲೈಓವರ್ ಅನ್ನು ಶುಕ್ರವಾರ ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿದರು.
ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಪ್ರಮುಖ ವಿಷಯವಾಗಿ ಪರಿಣಮಿಸಿತ್ತು. 2010ರಲ್ಲಿ ನವಯುವ ಕಂಪನಿ ಗುತ್ತಿಗೆ ಪಡೆದು ಆರಂಭಿಸಿದ್ದ 600 ಮೀಟರ್ ಉದ್ದದ ಫ್ಲೈಓವರ್ ಕಾಮಗಾರಿ 2013ಕ್ಕೆ ಮುಕ್ತಾಯಗೊಳ್ಳಬೇಕಿತ್ತು. ಆದರೆ ಕಾಮಗಾರಿ 10 ವರ್ಷವಾದರೂ ಪೂರ್ಣಗೊಳ್ಳದೇ ಹತ್ತಾರು ಗಡುವುಗಳನ್ನು ನೀಡಲಾಗಿತ್ತು. ನಿಧಾನಗತಿ ಕಾಮಗಾರಿಯಿಂದ ಫ್ಲೈ ಓವರ್ ಭಾರೀ ಸುದ್ದಿಯಾಗಿತ್ತು. ಮಾತ್ರವಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಸಂಸದ ನಳಿನ್ ಕುಮಾರ್ ಭಾರೀ ಟ್ರೋಲ್ ಗೆ ಒಳಗಾಗಿದ್ದರು.
ಪೂರ್ಣಗೊಂಡಿರುವ ಪಂಪ್‍ವೆಲ್ ಮೇಲ್ಸೇತುವೆಯ ಕಾಮಗಾರಿಯನ್ನು ಬುಧವಾರದಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ರವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ವೀಕ್ಷಿಸಿದ್ದರು. ಈ ಸಂದರ್ಭದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ್, ಬಿಜೆಪಿ ಕಾರ್ಯಕರ್ತರು, ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು.