ದೇಗುಲಗಳ ಆದಾಯ ಅಲ್ಪಸಂಖ್ಯಾತ ಧಾರ್ಮಿಕ ಕೇಂದ್ರಗಳಿಗೆ ಬಳಸಲ್ಲ:ಕೋಟ
ಮೈಸೂರು: ‘ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ದೇಗುಲಗಳಿಂದ ಬರುವ ಹಣವನ್ನು ಅನ್ಯ ಕಾರ್ಯಕ್ರಮಗಳಿಗೆ ಬಳಸುವುದಿಲ್ಲ. ಬದಲಾಗಿ ಆಯಾಯ ದೇಗುಲಗಳ ಅಭಿವೃದ್ಧಿಗೆ ಮೀಸಲಿಡಲಾಗಿದೆ’ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ‘ಬಿಜೆಪಿ ಸರ್ಕಾರ ಬಂದ ಮೇಲೆ ಹಿಂದೂ ದೇಗುಲಗಳ ಆದಾಯವನ್ನು ಅಲ್ಪಸಂಖ್ಯಾತರ ಧಾರ್ಮಿಕ ಕೇಂದ್ರಗಳ ಕಾರ್ಯಗಳಿಗೆ ಬಳಸುತ್ತಿಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳುತ್ತೇನೆ. ಒಂದು ಪೈಸೆಯೂ ಆಚೆಈಚೆ ಆಗುತ್ತಿಲ್ಲ. ಸಾರ್ವಜನಿಕರಲ್ಲಿ ಈ ಸಂಬಂಧ ಗೊಂದಲವಿದ್ದು, ಅದನ್ನು ಬಗೆಹರಿಸಲು ಪ್ರಯತ್ನಿಸುತ್ತಿದ್ದೇವೆ’ ಎಂ ದರು. ದೇಗುಲಗಳಲ್ಲಿ ಶೌಚಾಲಯ, ವಸತಿ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು, ಸಿಬ್ಬಂದಿ ನೇಮಿಸಲು ಆದಾಯದ ಹಣವನ್ನು ಬಳಸಿಕೊಳ್ಳಲಾಗುತ್ತಿದೆ ಎಂದರು. ಮೈಸೂರಿನ ಚಾಮುಂಡೇಶ್ವರಿ, ನಂಜನಗೂಡಿನ ಶ್ರೀಕಂಠೇಶ್ವರ ಹಾಗೂ ತಲಕಾಡು ದೇಗುಲ ಸೇರಿದಂತೆ ಉತ್ತಮ ಆದಾಯವಿರುವ ರಾಜ್ಯದ ಸುಮಾರು 100 ದೇವಾಲಯಗಳಲ್ಲಿ ಸಾಮೂಹಿಕ ಹಾಗೂ ಸರಳ ವಿವಾಹ ಹಮ್ಮಿಕೊಳ್ಳಲಾಗಿದೆ. ಏಪ್ರಿಲ್ 26 ಹಾಗೂ ಮೇ 24ರಂದು ಎರಡು ಹಂತಗಳಲ್ಲಿ ಈ ಕಾರ್ಯಕ್ರಮ ನಡೆಸಲಾಗುತ್ತದೆ ಎಂದರು. ಮುಜರಾಯಿ ಇಲಾಖೆಯನ್ನು ಸಕಾಲ ಯೋಜನೆಯಡಿ ತರಲು ಸರ್ಕಾರ ಸಮಿತಿ ರಚಿಸಿದೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು. |