ಪೊಲೀಸರಲ್ಲಿ ಮನೋವಾದಿ ಸಂಸ್ಕ್ರತಿ ತುಂಬಿದೆ:ಚಿಂತಕ ಮಣೂರು
ಉಡುಪಿ:
ಕೋಮುವಾದಿ ಮನಸ್ಥಿತಿ ಹೊಂದಿರುವ ಮನುವಾದಿಗಳು ದಲಿತರು, ಹಿಂದುಳಿದ ವರ್ಗದವರು,ಮುಸ್ಲಿಮರು ಹಾಗೂ ಕ್ರೈಸ್ತರು ಒಂದಾಗಬಾರದೆಂಬ ಉದ್ದೇಶದಿಂದ ನಮ್ಮ ವಿರುದ್ಧ ಪಿತೂರಿನಡೆಸುತ್ತಿದ್ದಾರೆ ಎಂದು ದಲಿತ ಚಿಂತಕ ನಾರಾಯಣ ಮಣೂರು ಆರೋಪಿಸಿದರು.
ಗುಂಡ್ಲುಪೇಟೆಯಲ್ಲಿ ನಡೆದ ದಲಿತ ಯುವಕನ ಮೇಲೆ ಹಲ್ಲೆ ಮತ್ತು ಬೆತ್ತಲೆ ಮೆರವಣಿಗೆ
ಘಟನೆಯನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ ಮತ್ತು ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಅಜ್ಜರಕಾಡಿನ ಹುತಾತ್ಮ ಸ್ಮಾರಕದ ಎದುರು ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.ದಲಿತರಿಗೆ ಶೇ. 18ರಷ್ಟು ಮಾತ್ರ ಮೀಸಲಾತಿ ಇರುವುದು. ಶೇ. 32ರಷ್ಟು ಮೀಸಲಾತಿಯನ್ನು ಹಿಂದುಳಿದ ವರ್ಗದವರು ಪಡೆದುಕೊಂಡಿದ್ದಾರೆ. ಆದರೂ ದಲಿತರು ಅಸ್ಪೃಶ್ಯರು, ಅವರು ಮೀಸಲಾತಿಯಿಂದ ಬಂದವರು ಮತ್ತು ಮುಸ್ಲಿಮರು ಭಯೋತ್ಪಾದಕರಂತೆ, ಕ್ರಿಶ್ಚಿಯನ್ನರು ಮತಾಂತರಿಗಳೆಂದು ಬಿಂಬಿಸಿ ಹಿಂದುಳಿದ ವರ್ಗದವರ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ.
ಆ ಮೂಲಕ ಅವರು ಒಂದಾಗದಂತೆ ಪಿತೂರಿ ನಡೆಸುತ್ತಿದ್ದಾರೆ. ಇದು ಅಘಾತಕಾರಿ
ಬೆಳವಣಿಗೆಯಾಗಿದೆ ಎಂದರು.ಕೋಮುವಾದಿಗಳು ಹಾಗೂ ಮನುವಾದಿಗಳು ದೇವಸ್ಥಾನದೊಳಗೆ ಪ್ರವೇಶ ಕಲ್ಪಿಸದ ಹಿಂದೂ ಧರ್ಮ ನಮಗೆ ಬೇಡ. ಮನೆಯಲ್ಲಿರುವ ದೇವರ ಪೋಟೊಗಳನ್ನು ತಿಪ್ಪೆಗುಂಡಿಗೆ ಬಿಸಾಡಬೇಕು. ಹಿಂದು ಧರ್ಮವನ್ನು ದಿಕ್ಕರಿಸಬೇಕು. ನಾವು ಶಾಂತಿ ಪ್ರಿಯರು, ಬುದ್ಧನ ಅನುಯಾಯಿಗಳು. ಹಿಂದೂ
ಧರ್ಮವನ್ನು ದಿಕ್ಕರಿಸಿ,
ಅಂಬೇಡ್ಕರ್ ಅವರು ದಾರಿ ಮಾಡಿಕೊಟ್ಟ ಬೌದ್ಧ ಧರ್ಮ ಸ್ವೀಕಾರ
ಮಾಡುವುದರ ಮೂಲಕ ನೆಮ್ಮದಿ, ಸ್ವಾಭಿಮಾನ ಬದುಕು ನಡೆಸಬೇಕು. ಅಲ್ಲದೆ, ಅಸ್ಪೃಶ್ಯರು ಎಂಬ ಹೀನಾಯ ಮನಸ್ಥಿತಿಯಿಂದ ಹೊರಬರಬೇಕು ಎಂದರು.
ಉಡುಪಿ ಜಿಲ್ಲೆಯಲ್ಲಿ ಅಸ್ಪೃಶ್ಯತೆ ಇದೆಯೋ, ಇಲ್ಲವೋ ಎಂಬುವುದನ್ನು ಖಾತ್ರಿ ಪಡಿಸಲು
ನಾವೊಮ್ಮೆ ದೇವಸ್ಥಾನಕ್ಕೆ ಪ್ರವೇಶ ಮಾಡಬೇಕು. ಆಗ ನಮಗೆ ಇಲ್ಲಿಯ ನಿಜ ಸ್ವರೂಪ
ತಿಳಿಯುತ್ತದೆ. ಒಂದು ವೇಳೆ ನಾವು ದೇವಸ್ಥಾನಕ್ಕೆ ಬಲವಂತವಾಗಿ ಪ್ರವೇಶಕ್ಕೆ ಮುಂದಾದರೆ ಗುಂಡ್ಲು ಪೇಟೆಕ್ಕಿಂತಲೂ ಭೀಕರವಾದ ಘಟನೆ ನಡೆಯುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಹೇಳಿದರು.
ದಲಿತ ಮುಖಂಡ ಶೇಖರ ಹೆಜಮಾಡಿ ಮಾತನಾಡಿ, ದಲಿತ ಯುವಕನ ಬೆತ್ತಲೆ ಪ್ರಕರಣವನ್ನು ಪೇಜಾವರ ಶ್ರೀಗಳು ಗಂಭೀರವಾಗಿ ಪರಿಗಣಿಸಬೇಕು. ಆದಷ್ಟು ಬೇಗ ಗುಂಡ್ಲುಪೇಟೆಗೆ ಹೋಗಿ ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಒತ್ತಡ ಹಾಕಬೇಕು. ಪೊಲೀಸರು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಚಿಂತಕ ಜಿ. ರಾಜಶೇಖರ್ ಮಾತನಾಡಿ, ಗುಂಡ್ಲು ಪೇಟೆಯಲ್ಲಿ ನಡೆದಿರುವುದು ಬೆತ್ತಲೆ
ಮೆರವಣಿಗೆಯಲ್ಲ. ಆತನಿಗೆ ಹಿಂಸೆ ನೀಡಿ, ಬೆತ್ತಲೆ ಮಾಡಿ ಪ್ರಾಣಿಯಂತೆ ಎಳೆದುಕೊಂಡು
ಹೋಗಿದ್ದಾರೆ. ಇದೊಂದು ಅವಮಾನವೀಯ ಘಟನೆ. ಈ ಕೃತ್ಯದ ಹಿಂದೆ ಕೇವಲ ಪುರೋಹಿತ ವರ್ಗದ ಕೈವಾಡ ಮಾತ್ರವಲ್ಲ, ಪೊಲೀಸ್ ಇಲಾಖೆ, ಆಡಳಿತ ವ್ಯವಸ್ಥೆಯ ಬೆಂಬಲವೂ ಇದೆ ಎಂದು ಹೇಳಿದರು. ದೇವಸ್ಥಾನಕ್ಕೆ ಪ್ರವೇಶಿಸಿದ ಯುವಕನನ್ನು ಮಾನಸಿಕ ಅಸ್ವಸ್ಥನೆಂದು ಬಿಂಬಿಸಲಾಗುತ್ತಿದೆ. ಹಾಗಾದರೆ ಮಾನಸಿಕ ಅಸ್ವಸ್ಥ ಬೈಕ್ ಓಡಿಸಲು ಸಾಧ್ಯವೇ?.
ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡಿರುವುದು ಸುಳ್ಳೇ ಎಂದು ಪ್ರಶ್ನಿಸಿದರು.
ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿಯ ವಿಲಿಯಂ ಮಾರ್ಟಿಸ್,ಬಾಲಕೃಷ್ಣ ಶೆಟ್ಟಿ, ಶ್ಯಾಮ್‌ರಾಜ್ ಬಿರ್ತಿ, ಎಸ್. ನಾರಾಯಣ, ವಾಸು ನೇಜಾರು, ಹುಸೇನ್ ಕೋಡಿಬೆಂಗ್ರೆ,ದಿನಕರ ಬೇಂಗ್ರೆ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.