ಸ್ವಾರ್ಥರಹಿತ ಆರಾಧನೆ ಮಾಡಿದಾಗ ಮೋಕ್ಷದ ಹಾದಿ ಸುಗಮ:ಪೂರ್ಣಾಮೃತಾನಂದ ಪುರಿ ಸ್ವಾಮೀಜಿ

ಉಡುಪಿ: ಸ್ವಾರ್ಥರಹಿತವಾಗಿ ಭಕ್ತಿ ಶ್ರದ್ಧೆಯಿಂದ ಧಾರ್ಮಿಕ ಚಿಂತನೆಯೊಂದಿಗೆ ದೇವರನ್ನು ಸದಾ ಆರಾಧನೆ ಮಾಡಿದಾಗ ಮಾತ್ರ ಮನುಷ್ಯನಿಗೆ ಮೋಕ್ಷದ ಹಾದಿ ಸುಗಮವಾಗುತ್ತದೆ ಎಂದು ಕೇರಳ ಕೊಲ್ಲಂ ಮಾತಾ ಅಮೃತಾನಂದಮಯಿ ಮಠದ ಪ್ರಧಾನ ಕಾರ್ಯದರ್ಶಿ ಪೂರ್ಣಾಮೃತಾನಂದ ಪುರಿ ಸ್ವಾಮೀಜಿ ತಿಳಿಸಿದ್ದಾರೆ.


ಉಡುಪಿ ನಗರದ ಬನ್ನಂಜೆ ನಾರಾಯಣಗುರು ಸಭಾಭವನದಲ್ಲಿ ಉಡುಪಿಯ ಮಾತಾ ಅಮೃತಾನಂದಮಯಿ ಸೇವಾ ಸಮಿತಿ ವತಿಯಿಂದ ನಡೆದ ಸತ್ಸಂಗ,ಧ್ಯಾನ,ಭಜನೆಯನ್ನೊಳಗೊಂಡ ಅಮೃತ ವೈಭವ ಧಾರ್ಮಿಕ ಸಮಾರಂಭದಲ್ಲಿ ಶನಿವಾರ ಸಂಜೆ ಅವರು ಆಶೀರ್ವಚನ ನೀಡಿದರು.
ಭಕ್ತಿ ಮಾರ್ಗವನ್ನು ಅನುಸರಿಸುವುದರಿಂದ ಜೀವನದಲ್ಲಿ ಸದಾ ಮಾನಸಿಕ ನೆಮ್ಮದಿಯನ್ನು ಕಂಡುಕೊಳ್ಳಲು ಸಾಧ್ಯವಿದೆ.

ಆಧುನಿಕ ಜಂಜಾಟದಲ್ಲಿ ಮುಕ್ತಿಯ ಪಥವನ್ನು ಕಾಣಬೇಕಾದರೆ ನಿಷ್ಕಲ್ಮಶ ಹೃದಯದಿಂದ ಪರಮಾತ್ಮನ ಸ್ಮರಣೆ ಮಾಡಬೇಕಾದುದು ಅನಿವಾರ್ಯ ಎಂದರು. ಉಡುಪಿ ಶ್ರೀ ಕೃಷ್ಣನ ನಾಡಿನಲ್ಲಿ ಮಾತಾ ಅಮೃತಾನಂದಮಯಿ ಅಮ್ಮನವರ ಅಮೃತ ವೈಭವ ಕಾರ್ಯಕ್ರಮವನ್ನು ಆಯೋಜಿಸಲು ಅನುವು ಮಾಡಿಕೊಟ್ಟಂತಹ ಉಡುಪಿಯ ಭಗವದ್ಭಕ್ತರು ಹಾಗೂ ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ ಕಾರ್ಯ ಅಭಿನಂದನೀಯ ಎಂದರು.


ಕಾರ್ಯಕ್ರಮಕ್ಕೆ ಮುನ್ನ ಸ್ವಾಮೀಜಿ ಅವರನ್ನು ಪುರ್ಣಕುಂಭ ಸ್ವಾಗತದೊಂದಿಗೆ ಧಾರ್ಮಿಕ ವೇದಿಕೆಗೆ ಕರೆ ತರಲಾಯಿತು. ಸುಮಾರು ಮೂರು ಗಂಟೆಗಳ ಕಾಲ ನಿರಂತರ ಭಜನಾ ಕಾರ್ಯಕ್ರಮ, ಸತ್ಸಂಗ,ಧ್ಯಾನ,ಪೂಜೆ ಮತ್ತು ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಿತು.

ಇದೇ ವೇಳೆ ಮಾತಾ ಅಮೃತಾನಂದಮಯಿ ಅಮ್ಮನವರ ಪರಮಭಕ್ತರಾದ ಶಿವಪ್ರಸಾದ್ ಶೆಟ್ಟಿಗಾರ್ ಉಡುಪಿ ಅವರನ್ನು ಸ್ವಾಮೀಜಿ ಅವರು ಅಭಿನಂದಿಸಿದರು. ಮಂಗಳೂರು ಮಾತಾ ಅಮೃತಾನಂದಮಯಿ ಮಠದ ಮಠಾಧಿಪತಿ ಬ್ರಹ್ಮಚಾರಿಣಿ ಮಂಗಳಾಮೃತ ಚೈತನ್ಯ, ಉಡುಪಿ ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ ಗೌರವಾಧ್ಯಕ್ಷ ಶ್ರೀಧರ್ ಕಿನ್ನಿಮೂಲ್ಕಿ, ಪ್ರಧಾನ ಕಾರ್ಯದರ್ಶಿ ಯೋಗೀಶ್ ಕೊಡವೂರು, ಉಪಾಧ್ಯಕ್ಷರಾದ ನವೀನ್ ಪಿವಿಟಿ, ಭವಾನಿಶಂಕರ್, ಕಿಶೋರ್ ಉದ್ಯಾವರ, ಜತೆಕಾರ್ಯದರ್ಶಿ ದಯಾನಂದ ಶ್ರೀಯಾನ್, ಕೋಶಾಧಿಕಾರಿ ಪದ್ಮನಾಭ ಪುತ್ರನ್,ಭಾಸ್ಕರ ಉದ್ಯಾವರ ಮತ್ತಿತರರು ಉಪಸ್ಥಿತರಿದ್ದರು. ಪ್ರಕಾಶ ಸುವರ್ಣ ಕಟಪಾಡಿ ಕಾರ್ಯಕ್ರಮ ನಿರೂಪಿಸಿದರು

Leave a Reply

Your email address will not be published. Required fields are marked *

error: Content is protected !!