ಈಶ ಪ್ರಿಯರ ಪರ್ಯಾಯ ದರ್ಬಾರ್ ಸಂಪನ್ನ

ಉಡುಪಿ: ಪರ್ಯಾಯ ಸಂಕಲ್ಪಗಳು ಈಡೇರಬೇಕಾದರೆ ಭಗವಂತನ ಶ್ರೀರಕ್ಷೆ, ಭಕ್ತರ ಸಹಕಾರ ಅಗತ್ಯ ಎಂದು ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ಶನಿವಾರ ರಾಜಾಂಗಣದಲ್ಲಿ ಪರ್ಯಾಯ ದರ್ಬಾರ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು, ಕೃಷ್ಣ ಯಾದವರನ್ನು ಒಗ್ಗೂಡಿಸಿ ದುಷ್ಟರನ್ನು ಸಂಹಾರ ಮಾಡಿದ. ಕೃಷ್ಣನ ಚಿಂತನೆಗಳನ್ನು ಮೈಗೂಡಿಸಿಕೊಂಡರೆ ಜೀವನ ಆನಂದಮಯವಾಗುತ್ತದೆ’ ಎಂದರು.

ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿ ಮಾತನಾಡಿ, ಅದಮಾರು ಮಠದ ಹಿರಿಯ ಗುರುಗಳ ಮನಸ್ಸನ್ನು ಗೆದ್ದು ಸರ್ವಜ್ಞ ಪೀಠವೇರುವ ಅವಕಾಶ ಪಡೆದ ಈಶಪ್ರಿಯರ ಭಾಗ್ಯ ದೊಡ್ಡದು ಎಂದು ಅಭಿಪ್ರಾಯಪಟ್ಟರು.ದರ್ಬಾರ್ ಸಮಯ ಬದಲಿಸಿದ್ದು ಸ್ವಾಮೀಜಿಗಳ ನಿದ್ರೆ ಭಂಗವಾಗುತ್ತದೆ ಎಂದಲ್ಲ, ಕೃಷ್ಣನಿಗೆ ಬೆಳಗಿನ ಮಹಾಪೂಜೆ ತಡವಾಗದಿರಲಿ ಎಂಬ ಕಾರಣಕ್ಕೆ ಎಂದರು.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿ, ಅಷ್ಠಮಠಗಳ ಎದುರಲ್ಲಿ ಮಾತನಾಡುವ ಅವಕಾಶ ಸಿಕ್ಕಿದ್ದು ಹಾಗೂ ಮಠದ ಐತಿಹಾಸಿಕ ಕಾರ್ಯಕ್ರಮದ ಭಾಗವಾಗಿರುವುದು ಸಂತಸ ತಂದಿದೆ ಎಂದರು.

ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಮಾತನಾಡಿ, ಅದಮಾರು ಮಠಕ್ಕೂ ಮೈಸೂರು ಅರಮನೆಗೂ ಹಳೆಯ ನಂಟಿದೆ. ತಾತ ಜಯಚಾಮರಾಜೇಂದ್ರ ಒಡೆಯರ್ ಪೇಜಾವರ ಮಠದ ಮೊದಲ ಪರ್ಯಾಯದಲ್ಲಿ ಅತಿಥಿ ಭವನದ ಉದ್ಘಾಟನೆಗೆ ಆಗಮಿಸಿದ್ದರು. ಪೇಜಾವರ ಶ್ರೀಗಳ 5ನೇ ಪರ್ಯಾಯಕ್ಕೆ ನವೀಕೃತ ಅತಿಥಿ ಭವನದ ಉದ್ಘಾಟನೆ ಮಾಡುವ ಸೌಭಾಗ್ಯ ನನಗೆ ದೊರೆಯಿತು ಎಂದು ಸ್ಮರಿಸಿದರು.

ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ಮಾತನಾಡಿ, 2 ವರ್ಷಗಳ ಪರ್ಯಾಯ ಪೂಜೆ ವಿಘ್ನಗಳು ಬಾರದಂತೆ ನೆರವೇರಲಿ ಎಂದು ಆಶಿಸಿದರು.

ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥರು ಮಾತನಾಡಿ, ಈಶಪ್ರಿಯ ತೀರ್ಥರು ಪ್ರಾಚೀನತೆ ಹಾಗೂ ಆಧುನಿಕತೆಯ ಸಮ್ಮಿಳಿತದ ವಿಶಿಷ್ಟ ವ್ಯಕ್ತಿತ್ವ ಹೊಂದಿದ್ದು, ಈ ಬಾರಿ ಪ್ಲಾಸ್ಟಿಕ್‌ ಫ್ಲೆಕ್ಸ್‌ಗಳಿಗೆ ಕಡಿವಾಣ ಹಾಕಿ ಪರಿಸರ ಸ್ನೇಹಿ ವಸ್ತುಗಳಿಗೆ ಒತ್ತು ನೀಡಿದ್ದಾರೆ. ಅವರ ಪರ್ಯಾಯ ವಿಶಿಷ್ಟವಾಗಿ ನಡೆಯಲಿದೆ ಎಂದರು.

ಸೋದೆ ಮಠದ ವಿಶ್ವವಲ್ಲಭ ತೀರ್ಥರು ಮಾತನಾಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 22 ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ರಘುಪತಿ ಭಟ್‌, ನಾಯಕ ವೀರಪ್ಪ ಮೊಯಿಲಿ, ಪ್ರಮೋದ್‌ ಮಧ್ವರಾಜ್‌ ಇದ್ದರು.

Leave a Reply

Your email address will not be published. Required fields are marked *

error: Content is protected !!