ಮದ್ಯ ಬೇಕೆಂದ ವೈದ್ಯನಿಗೆ 10 ಸಾವಿರ ದಂಡ ವಿಧಿಸಿದ ಹೈಕೋರ್ಟ್
ಬೆಂಗಳೂರು: ಲಾಕ್‍ಡೌನ್ ವೇಳೆ ಮದ್ಯ ಮಾರಾಟಕ್ಕೆ ಅನುಮತಿ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಸಲ್ಲಿಸಿದ್ದ ಮನೋವೈದ್ಯರಿಗೆ ಹೈಕೋರ್ಟ್ 10 ಸಾವಿರ ರೂ. ದಂಡ ವಿಧಿಸಿ ಅರ್ಜಿ ವಜಾಗೊಳಿಸಿದೆ.
ಕೊರೊನಾ ವೈರಸ್ ಹಾವಳಿ ತಡೆಗಟ್ಟುವ ಸಂಬಂಧ ದೇಶದಲ್ಲಿ ಲಾಕ್‍ಡೌನ್ ಜಾರಿಯಾಗಿದ್ದು ಎಲ್ಲ ರಾಜ್ಯ ಸರ್ಕಾರಗಳು ಮದ್ಯ ಮಾರಾಟಕ್ಕೆ ನಿಷೇಧ ಹೇರಿದೆ. ಕರ್ನಾಟಕದಲ್ಲೂ ನಿಷೇಧ ಹೇರಿದ್ದನ್ನು ಪ್ರಶ್ನಿಸಿ ಹುಬ್ಬಳ್ಳಿಯ ಖ್ಯಾತ ಮನೋವೈದ್ಯ ವಿನೋದ್ ಕುಲಕರ್ಣಿ ಮದ್ಯ ಮಾರಾಟಕ್ಕೆ ಅನುಮತಿ ಕೋರಿ ಪಿಐಎಲ್ ಸಲ್ಲಿಸಿದ್ದರು.
ಮುಖ್ಯ ನ್ಯಾ. ಎ.ಎಸ್.ಒಕಾ, ನ್ಯಾ.ಬಿ.ವಿ.ನಾಗರತ್ನರವ ದ್ವಿಸದಸ್ಯ ಪೀಠ ಈ ಅರ್ಜಿಯನ್ನು ವಜಾಗೊಳಿಸಿ 10 ಸಾವಿರ ರೂ. ದಂಡವನ್ನು ವಿಧಿಸಿದೆ. ಈ ದಂಡದ ಹಣವನ್ನು ಸಿಎಂ ಪರಿಹಾರ ನಿಧಿಗೆ ನೀಡುವಂತೆ ಸೂಚಿಸಲಾಗಿದೆ.
ಈ ಸಂದರ್ಭದಲ್ಲಿ ಆಹಾರ, ಚಿಕಿತ್ಸೆ ಇತ್ಯಾದಿಗಳ ಬಗ್ಗೆ ಆದ್ಯತೆ ನೀಡಬೇಕು. ಆದರೆ ವೈದ್ಯರಾಗಿ ಮದ್ಯದ ಬಗ್ಗೆ ಕಾಳಜಿ ತೋರಿಸಿದ್ದು ಸರಿಯಲ್ಲ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು.
ಮದ್ಯ ನಿಷೇಧದಿಂದಾಗಿ ಮದ್ಯಪಾನ ಮಾಡುವವರು ಖಿನ್ನತೆಗೆ ಜಾರುತ್ತಿದ್ದಾರೆ. ಇದರಿಂದ ಆತ್ಮಹತ್ಯೆ ಹೆಚ್ಚಾಗುತ್ತದೆ. ಖಿನ್ನತೆಗೆ ಜಾರುವುದನ್ನು ತಪ್ಪಿಸಲು ಮದ್ಯ ಮಾರಾಟಕ್ಕೆ ಅನುಮತಿ ನೀಡಬೇಕೆಂದು ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು