ಪೇಜಾವರಶ್ರೀ ಭಾರತ ದೇಶ ಕಂಡಂತಹ ಅತೀ ಶ್ರೇಷ್ಠ ಸಂತ: ಮಟ್ಟಾರು
ಉಡುಪಿ: ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಪಾದರು ಭಾರತ ದೇಶ ಕಂಡಂತಹ ಅತೀ ಶ್ರೇಷ್ಠ ಸಂತ. ಅವರು ಅತ್ಯಂತ ವಿಶಿಷ್ಟ ವ್ಯಕ್ತಿತ್ವವನ್ನು ಹೊಂದಿರುವ ಸ್ವಾಮೀಜಿಗಳಾಗಿದ್ದು, ಇತರ ಸ್ವಾಮೀಜಿಗಳಿಗಿಂತ ಅವರು ಭಿನ್ನವಾಗಿ ನಿಲ್ಲುತ್ತಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಹೇಳಿದರು.
ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೋಮವಾರ ನಡೆದ ಪೇಜಾವರ ವಿಶ್ವೇಶತೀರ್ಥ ಶ್ರೀಪಾದರ ಶ್ರದ್ಧಾಂಜಲಿ ಸಭೆಯಲ್ಲಿ ಪೇಜಾವರ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸಿ ಮಾತನಾಡಿದರು. ಉಡುಪಿಯ ಅಷ್ಟಮಠಾಧೀಶರು ಸಹಿತ ದೇಶದ ಉದ್ದಗಲಕ್ಕೂ ಅನೇಕ ಮಂದಿ ಸ್ವಾಮೀಜಿಗಳನ್ನು ಕಂಡಿದ್ದೇವೆ. ಆದರೆ ಅವರೆಲ್ಲಗಿಂತಲೂ ಪೇಜಾವರ ಶ್ರೀ ಬಹಳ ಭಿನ್ನ ನಿಲುವನ್ನು ತಳೆದಿದ್ದಾರೆ. ಜನರಲ್ಲಿ ಧರ್ಮದ ಜಾಗೃತಿ ಮೂಡಿಸುವುದರ ಜತೆಗೆ ಹಿಂದೂ ಧರ್ಮದ ಉದ್ಧಾರಕ್ಕಾಗಿ ಕೆಲಸ ಮಾಡಿದ್ದಾರೆ ಎಂದರು.
ಒರ್ವ ಯತಿಯಾದವನು ಸಾಮಾಜಿಕ ಕಾರ್ಯಗಳನ್ನು ಮಾಡಬಹುದೆಂಬುವುದನ್ನು ಸಮಾಜಕ್ಕೆ ತೋರಿಸಿಕೊಟ್ಟಿದ್ದಾರೆ. ಒರ್ವ ಮಠಾಧೀಶನಾಗಿ ದಲಿತಕೇರಿಗಳಿಗೆ ಭೇಟಿ ನೀಡುತ್ತಾರೆ. ನಾವೆಲ್ಲರೂ ಹಿಂದೂಗಳೇ, ನಮ್ಮಲ್ಲಿ ಒಡಕು ಇರಬಾರದು. ದಲಿತರಿಂದ ಹಿಡಿದು ಬ್ರಾಹ್ಮಣ ಸಮಾಜದವರೆಗೆ ಒಗ್ಗಟ್ಟಾಗಿರಬೇಕು. ಹಿಂದೂ ಸಮಾಜದ ಉನ್ನತಿಗಾಗಿ ನಾವೆಲ್ಲರೂ ಶ್ರಮಿಸಬೇಕೆಂದು ಕರೆ ನೀಡಿದ್ದರು. ಉಡುಪಿ ಅನೇಕ ಕಾರಣದಿಂದ ಜಗತ್ಪ್ರಸಿದ್ಧಯಾಗಿದೆ. ಉಡುಪಿ ಕೃಷ್ಣಮಠ, ಮಣಿಪಾಲ ಆಸ್ಪತ್ರೆಯ ಜತೆಗೆ ಪೇಜಾವರ ಶ್ರೀಗಳಿಂದ ಉಡುಪಿ ಇಡೀ ಜಗತ್ತಿನಲ್ಲಿ ಗುರುತಿಸಲ್ಪಟ್ಟಿದೆ. ಬಹುತೇಕ ಮಠಾಧೀಶರಿಗೆ ಪೇಜಾವರ ಶ್ರೀಗಳೇ ಗುರುಗಳಾಗಿದ್ದರು.ಅವರಿಂದ ಸಂಸ್ಕೃತ ವಿದ್ಯೆ ಕಲಿತವರು ಇಂದು ದೇವರ ಕೈಂಕರ್ಯಗಳನ್ನು ಮಾಡುತ್ತಿದ್ದಾರೆ.
ಶ್ರೀಗಳಿಂದಲೇ ವಿಗ್ರಹ ಪ್ರತಿಷ್ಠಾಪನೆ ಆಗಬೇಕಿತ್ತು:
ವಿವಾದಿತ ರಾಮ ಜನ್ಮಭೂಮಿಯಲ್ಲಿ ರಾಮನ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದರು. ನನ್ನ ಜೀವಿತಾವಧಿಯಲ್ಲಿಯೇ ರಾಮಮಂದಿರ ವಿವಾದ ಇತ್ಯರ್ಥ ಆಗಿ, ಅಲ್ಲಿ ರಾಮನ ಮಂದಿರ ನಿರ್ಮಾಣ ಆಗಬೇಕೆಂದು ಕನಸು ಕಂಡಿದ್ದರು. ಅದರಂತೆ ಅಯೋಧ್ಯೆ ವಿವಾದ ಬಗೆಹರಿದಿದೆ. ಅಯೋಧ್ಯೆಯಲ್ಲಿ ನಿರ್ಮಾಣ ಆಗುತ್ತಿರುವ ರಾಮಮಂದಿರದಲ್ಲಿ ರಾಮನ ವಿಗ್ರಹ ಪೇಜಾವರ ಶ್ರೀಗಳ ಕೈಯಿಂದಲೇ ಪ್ರತಿಷ್ಠಾಪನೆ ಆಗಬೇಕೆಂಬುವುದು ಉಡುಪಿಯ ಜನತೆಯ ಕನಸಾಗಿತ್ತು. ಆದರೆ ಅದು ಈಡೇರಿಲ್ಲ ಎಂಬ ಬೇಸರವಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಹೇಳಿದರು .
ಹಾಗಾಗಿ ಹಿಂದೂ ಧರ್ಮದ ಉನ್ನತಿ, ಸೇವೆಗಾಗಿ ಅವರು ಮತ್ತೆ ಹುಟ್ಟಿಬರಬೇಕು. ಎಲ್ಲ ಹಿಂದೂಗಳ ಆಶಯವೂ ಇದೇ ಆಗಿದೆ ಎಂದು ಹೇಳಿದರು. ಬಿಜೆಪಿ ಉಡುಪಿ ನಗರ ಅಧ್ಯಕ್ಷ ಪ್ರಭಾಕರ ಪೂಜಾರಿ, ನಿಯೋಜಿತ ಅಧ್ಯಕ್ಷ ಮಹೇಶ್ ಠಾಕೂರ್, ಯುವ ಮೋರ್ಚಾ ಅಧ್ಯಕ್ಷ ಶ್ರೀಶ ನಾಯಕ್ ಪೆರ್ಣಂಕಿಲ ಉಪಸ್ಥಿತರಿದ್ದರು. ನಗರಸಭಾ ಸದಸ್ಯ ಗಿರೀಶ್ ಅಂಚನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.