ಸರ್ಕಾರ ಒಂದು ಸಮುದಾಯವನ್ನು ಟಾರ್ಗೆಟ್ ಮಾಡುತ್ತಿದೆ
ಉಡುಪಿ: ಕೆಪಿಸಿಸಿ ಅಧ್ಯಕ್ಷರ ನೇಮಕ ವಿಚಾರದಲ್ಲಿ ಎಐಸಿಸಿ ಹೆಚ್ಚು ವಿಳಂಬ ಮಾಡಬಾರದು. ಪಕ್ಷದ ಎಲ್ಲ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಸಮಾಲೋಚಿಸಿ ಶೀಘ್ರವೇ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಹೇಳಿದರು.
ಉಡುಪಿ ಕೃಷ್ಣಮಠಕ್ಕೆ ಭಾನುವಾರ ಭೇಟಿ ನೀಡಿ ದೇವರ ದರ್ಶನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಮ್ಮ ಮುಂದೆ ಪಕ್ಷ ಸಂಘಟನೆ ಮಾಡಬೇಕಾದ ದೊಡ್ಡ ಜವಾಬ್ದಾರಿ ಇದೆ. ಈ ನಿಟ್ಟಿನಲ್ಲಿ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಎಲ್ಲರ ಸಹಮತ ಹಾಗೂ ಒಮ್ಮತದ ಅಭಿಪ್ರಾಯ ಮೂಡಿಸುವುದು ಅವಶ್ಯಕ’ ಎಂದರು.
ಈ ಹಿಂದೆ ಇಂದಿರಾ ಗಾಂಧಿಯ ಸರ್ಕಾರ ಉಗಾಂಡದಿಂದ ಬಂದಂತಹ ಭಾರತೀಯರಿಗೆ ಪೌರತ್ವ ಕೊಟ್ಟಿದೆ. ಶ್ರೀಲಂಕಾದಿಂದ ಬಂದ ಹಿಂದೂ, ಕ್ರಿಶ್ಚಿಯನ್ನರು ಹಾಗೂ ಮುಸ್ಲಿಮರಿಗೆ ಪೌರತ್ವ ನೀಡಿತ್ತು. ಆದರೆ ಮೋದಿ ಸರ್ಕಾರ ಒಂದು ಸಮುದಾಯವನ್ನು ಟಾರ್ಗೆಟ್ ಮಾಡುತ್ತಿದೆ. ಅದು ಸರಿಯಲ್ಲ. ಇದು ಸಂವಿಧಾನ ಬಾಹಿರ ವಾದುದು ಎಂದು ವಾಗ್ದಾಳಿ ನಡೆಸಿದರು.
ಸಿಎಎ ವಿರುದ್ಧ ಕಾಂಗ್ರೆಸ್ ಎಲ್ಲೂ ಪ್ರತಿಭಟನೆ ಮಾಡಿಲ್ಲ. ಕೆಲ ವಿದ್ಯಾರ್ಥಿ ಸಂಘಟನೆ, ಸಂಘ ಸಂಸ್ಥೆಯವರು ಸ್ವಯಂ ಪ್ರೇರಿತವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಇದನ್ನು ಸರ್ಕಾರ ಸರಿಯಾಗಿ ತಿಳಿದುಕೊಳ್ಳಬೇಕು. ಜನರ ಮೇಲೆ ಒತ್ತಡ ಹೇರುವ ಕೆಲಸ ಮಾಡಬಾರದು. ಇದು ಬಿಜೆಪಿ ವಿರುದ್ಧದ ಹೋರಾಟ ಅಲ್ಲ, ಇದು ಕಾನೂನಿನ ವಿರುದ್ಧದ ಹೋರಾಟ. ಜನರ ವಿರೋಧ ಕಟ್ಟಿಕೊಂಡು, ದೇಶವನ್ನು ಒಡೆಯುತ್ತೇವೆ ಎನ್ನುವುದಾದರೆ ಕಾನೂನು ಜಾರಿಗೊಳಿಸಲಿ ಎಂದು ಸವಾಲೆಸೆದರು.
ಕಾಂಗ್ರೆಸ್ ಹಿರಿಯ ಮುಖಂಡ ಕಪಿಲ್ ಸಿಬಲ್ ನೀಡಿರುವ ‘ಸಿಎಎ ಕಾಯ್ದೆಯ ಜಾರಿಯನ್ನು ಯಾವುದೇ ರಾಜ್ಯಗಳು ನಿರಾಕರಿಸುವಂತಿಲ್ಲ’ ಎಂಬ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಅದು ಕೇಂದ್ರ ಸರ್ಕಾರದ ಕಾನೂನು. ಅದನ್ನು ಉಲ್ಲಂಘಿಸಿದರೆ ಏನಾಗುತ್ತದೆ ಎಂಬುವುದನ್ನು ಮುಂದೆ ನೋಡಬೇಕಾಗುತ್ತದೆ. ಆದರೆ ಈ ಕಾಯ್ದೆಯನ್ನು ಬಹುತೇಕ ರಾಜ್ಯಗಳು ತಿರಸ್ಕರಿಸಲು ತೀರ್ಮಾನಿಸಿವೆ. ಅಲ್ಲದೆ, ಕಾಯ್ದೆಯ ವಿರುದ್ಧ ಸುಪ್ರೀಂ ಕೋರ್ಟ್‌ಗೂ ಹೋಗಿದ್ದಾರೆ. ಕೋರ್ಟ್ ಕೂಡ ಸೂಕ್ತ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಕಪಿಲ್ ಸಿಬಲ್ ಕಾನೂನಾತ್ಮಕ ವಿಚಾರವನ್ನು ಎತ್ತಿದ್ದಾರೆ. ಆದರೆ ಜನರು ತಿರುಗಿಬಿದ್ದಾಗ ಅದನ್ನು ಯಾವ ರೀತಿ ನಿಯಂತ್ರಿಸಲು ಸಾಧ್ಯ. ಹಾಗಾಗಿ ದೇಶದ ಬಗ್ಗೆ ಚಿಂತಿಸುವ ಅಗತ್ಯವಿದೆ ಎಂದು ಹೇಳಿದರು.
ಈ ದೇಶದಲ್ಲಿ ವೈಯಕ್ತಿಕ ಅಭಿಪ್ರಾಯವನ್ನು ಹಂಚಿಕೊಳ್ಳಲು ಎಲ್ಲರಿಗೂ ಅವಕಾಶ ಇದೆ. ರಾಮಚಂದ್ರ ಗುಹಾ ಅವರದ್ದು ವೈಯಕ್ತಿಕ ಅಭಿಪ್ರಾಯ. ಅದಕ್ಕೂ ನಮ್ಮ ಪಕ್ಷಕ್ಕೂ ಸಂಬಂಧವಿಲ್ಲ. ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹೀಗೆ ಗಾಂಧಿ ಕುಟುಂಬ ಈ ದೇಶಕ್ಕಾಗಿ ಸಾಕಷ್ಟು ತ್ಯಾಗ, ಹೋರಾಟ ಮಾಡಿದೆ. ರಾಹುಲ್ ಗಾಂಧಿ ಕೂಡ ದೇಶದಲ್ಲಿ ಜನರ ಸಮಸ್ಯೆಗಳಿಗೆ ಧ್ವನಿಯಾಗಿ ಹೋರಾಡಲು ನಿಂತಿರುವ ನಾಯಕ. ಕಾಂಗ್ರೆಸ್ ಪಕ್ಷಕ್ಕೆ ಇಂದು ರಾಹುಲ್ ಗಾಂಧಿಯ ನಾಯಕತ್ವ ಬಹಳ ಅಗತ್ಯವಿದ್ದು, ಅವರು ಪಕ್ಷವನ್ನು ಮುನ್ನಡೆಸುತ್ತಾರೆಂಬ ವಿಶ್ವಾಸವೂ ಇದೆ ಎಂದರು.