ಯತಿ ಶ್ರೇಷ್ಠನ ಹೆಜ್ಜೆ ಗುರುತು

ಉಡುಪಿ: ಅಷ್ಟ ಮಠದ ಹಿರಿಯ ಯತಿ, ನಾಡಿನ ಹಿರಿಯ ವಿದ್ವಾಂಸ, ಅಸ್ಪೃಶ್ಯತೆ ವಿರುದ್ಧ ಹೋರಾಡಿದ್ದ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ(88) ಕೃಷ್ಣೈಕ್ಯರಾಗಿದ್ದಾರೆ.

ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ವಿಧಿವಶರಾಗಿದ್ದಾರೆ.

ಜನನ ಮತ್ತು ಬಾಲ್ಯ:
ಅಷ್ಟಮಠಗಳಲ್ಲೇ ಹಿರಿಯ ಯತಿಯಾಗಿದ್ದ ಪೇಜಾವರ ಶ್ರೀ 1931 ಏಪ್ರಿಲ್ 27 ರಂದು ಉಡುಪಿಯಿಂದ 120 ಕಿ.ಮೀ ದೂರದಲ್ಲಿರುವ ಪುತ್ತೂರು ತಾಲೂಕಿನ ರಾಮಕುಂಜ ಹಳ್ಳಿಯಲ್ಲಿ ಜನಿಸಿದ್ದರು. ಪೇಜಾವರ ಶ್ರೀ ವಿಶ್ವೇಶತೀರ್ಥರು ನಾರಾಯಣಾಚಾರ್ಯ ಮತ್ತು ಕಮಲಮ್ಮ ದಂಪತಿಯ ಎರಡನೇ ಮಗನಾಗಿ ಜನಿಸಿದ ಇವರ ಮೂಲ ಹೆಸರು ವೆಂಕಟರಮಣ ಆಗಿತ್ತು.

ವಿದ್ಯಾಭ್ಯಾಸ – ವೆಂಕಟರಮಣ ರಾಮಕುಂಜದ ಹಳ್ಳಿಯ ಸಂಸ್ಕೃತ ಎಲಿಮೆಂಟರಿ ಶಾಲೆಯಲ್ಲೇ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ್ದಾರೆ. ಇವರು 7ನೇ ವರ್ಷದಲ್ಲೇ ಗಾಯತ್ರಿಯ ಉಪದೇಶ ಮಾಡಿದ್ದರು. ನಂತರ 8ನೇ ವಯಸ್ಸಲ್ಲೇ ಮುಖ್ಯಪ್ರಾಣ ಸನ್ನಿಧಿಯಲ್ಲಿ ದೀಕ್ಷೆ ಪಡೆದಿದ್ದರು. ಬಳಿಕ ಪೇಜಾವರ ಮಠದ ಪರಂಪರೆಯ 32ನೇಯ ಯತಿಯಾಗಿ ನೇಮಕಗೊಂಡಿದ್ದರು.

ಹೋರಾಟದ ಜೀವನ – ಪೇಜಾವರ ಶ್ರೀ ಅಸ್ಪೃಶ್ಯತೆ ವಿರುದ್ಧ ಧ್ವನಿ ಎತ್ತುತ್ತಿದ್ದರು. ಜೊತೆಗೆ ಇವರು ಗಾಂಧೀಜಿ ವಿಚಾರಧಾರೆಯನ್ನು ಪಾಲಿಸುತ್ತಿದ್ದರು. ದಿನ ಕಳೆದಂತೆ ಪೇಜಾವರ ಶ್ರೀ ಮಠದ ಯತಿಗಳು ಉತ್ಸವಗಳಲ್ಲಿ ಧರಿಸುತ್ತಿದ್ದ ಪಟ್ಟೆ, ಪೀತಾಂಬರಗಳ ವೈಭವದ ಪೋಷಾಕನ್ನು ತೊರೆದು ಶುದ್ಧ ಖಾದಿಧಾರಿಯಾಗುವ ದೀಕ್ಷೆ ತೊಟ್ಟರು. ನಂತರ ಮಠದಲ್ಲಿ ಸ್ವಾಮಿಗಳಿಗೆ ಪ್ರತ್ಯೇಕ ಅಡುಗೆ ಮಾಡುವ ಪದ್ಧತಿಯನ್ನು ರದ್ದುಗೊಳಿಸಿದರು.
1951 ಜನವರಿ 18ರಂದು 21ರ ಹರೆಯದಲ್ಲೇ ಮೊದಲ ಪರ್ಯಾಯ ಪೀಠವೇರಿದ್ದ ಪೇಜಾವರ ಶ್ರೀ ಒಟ್ಟು 5 ಬಾರಿ ಪರ್ಯಾಯ ಪೀಠವೇರಿ ಕೃಷ್ಣ ಪೂಜೆ ನಡೆಸಿದ ಎರಡನೇ ಹಿರಿಯ ಯತಿ ಎಂದು ಖ್ಯಾತಿ ಪಡೆದಿದ್ದಾರೆ. ಕೃಷ್ಣನನ್ನ ಉಡುಪಿಯಲ್ಲಿ ಪ್ರತಿಷ್ಠಾಪಿಸಿದ ಮಧ್ವಾಚಾರ್ಯರು ಬಿಟ್ಟರೆ ಪೇಜಾವರ ಶ್ರೀ ವಿಶ್ವೇಶತೀರ್ಥರೇ ಐದು ಬಾರಿ ಪರ್ಯಾಯ ಪೀಠ ಏರಿದ ವಿಶೇಷ ಸಾಧನೆ ಮಾಡಿದ್ದರು.

Leave a Reply

Your email address will not be published. Required fields are marked *

error: Content is protected !!