ಸಾಮಾನ್ಯ ವ್ಯಕ್ತಿಯ ಅಸಾಮಾನ್ಯ ಸಾಧನೆ ; ಪ್ರಕಾಶಾಭಿನಂದನ ದಲ್ಲಿ ಮುಖ್ಯಮಂತ್ರಿ
ಮಂಗಳೂರು: ‘ಸಾಮಾನ್ಯ ವ್ಯಕ್ತಿ ಅಸಾಮಾನ್ಯ ಸಾಧನೆ ಮಾಡಿ, ಸಮಾಜಕ್ಕೆ ಮಾದರಿಯಾಗಬಹುದು ಎಂಬುದಕ್ಕೆ ಪ್ರಕಾಶ್ ಶೆಟ್ಟಿಯೇ ಸಾಕ್ಷಿ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಣ್ಣಿಸಿದರು. ಉದ್ಯಮಿ ಕೊರಂಗ್ರಪಾಡಿ ಪ್ರಕಾಶ್ ಶೆಟ್ಟಿ ಅವರಿಗೆ 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ನಗರದ ಬಂಗ್ರ ಕೂಳೂರಿನ ಗೋಲ್ಡ್‌ಫಿಂಚ್ ಮೈದಾನದಲ್ಲಿ ಬುಧವಾರ ಹಮ್ಮಿಕೊಳ್ಳಲಾದ ‘ಪ್ರಕಾಶಾಭಿನಂದನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.‘ಬದುಕಿನಲ್ಲಿ ಆಗಸದತ್ತ ಮುಖ ಮಾಡಿದರೆ ಸಾಲದು. ಅತ್ತ ಪುಟಿಯುವ ಸಾಹಸ ಮಾಡಬೇಕು. ಆಗ, ನಾವು ಸಾಧನೆಯ ಮೆಟ್ಟಿಲಲ್ಲಿ ಏರಬಹುದು ಎನ್ನುವುದನ್ನು ಅವರು ತೋರಿಸಿದ್ದಾರೆ’ ಎಂದರು.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ‘ಶೆಟ್ಟಿ ಅವರ ಆರ್ಥಿಕ ಶ್ರೀಮಂತಿಕೆಗಿಂತ, ಸಮಾಜಕ್ಕೆ ನೆರವಾಗಬೇಕು ಎನ್ನುವ ಮನಸ್ಸಿನ ಸಿರಿತನ ಬಹುದೊಡ್ಡದು. ಅವರ 100ನೇ ವರ್ಷಕ್ಕೂ ನಾವೆಲ್ಲ ಸೇರೋಣ’ ಎಂದು ಹಾರೈಸಿದರು.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, ‘ಸಾಮಾನ್ಯ ಕುಟುಂಬದಿಂದ ಬಂದ ಶೆಟ್ಟಿಯವರು, ಸ್ವಯಂ ಪ್ರಯತ್ನದಿಂದ ಸಾಧನೆಯ ಮೆಟ್ಟಿಲನ್ನು ಏರಿದ್ದಾರೆ. ಅದಕ್ಕಾಗಿಯೇ ಇಲ್ಲಿ ಜನ ಬಂದು ಸೇರಿದ್ದಾರೆ’ ಎಂದು ಅಭಿನಂದಿಸಿದರು.
ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಮಾತನಾಡಿ, ‘ನಾನು ಶೆಟ್ಟಿ ಅವರ ಕುಟುಂಬ ಸದಸ್ಯನಂತೆ. ಏಕೆಂದರೆ, ಅವರದ್ದು ಸಾಕಷ್ಟು ಶ್ರೀಮಂತಿಕೆ ಇದ್ದರೂ, ಸಾಮಾನ್ಯರಿಗೆ ನೆರವಾಗುವ ಕುಟುಂಬ. ಆ ಪ್ರೀತಿಯನ್ನು ಸ್ವತಃ ಮನಗಂಡಿದ್ದೇನೆ’ ಎಂದರು.
ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ‘ಕಾರಂತರು ತಮ್ಮ 90ರ ಹರೆಯದಲ್ಲೂ ಕ್ರಿಯಾಶೀಲರಾಗಿದ್ದರು. ಅದೇ ರೀತಿ ಉದ್ಯಮ ಹಾಗೂ ಸಮಾಜ ಸೇವೆಯಲ್ಲಿ ಶೆಟ್ಟಿಯವರು. ಅವರ ಕೊಡುಗೆ ಅನನ್ಯ’ ಎಂದರು.
ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ ನಾರಾಯಣ, ಸಂಸದೆ ಶೋಭಾ ಕರಂದ್ಲಾಜೆ, ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿ ಎನ್. ವಿನಯ ಹೆಗ್ಡೆ, ಪ್ರಕಾಶಾಭಿನಂದನ ಸಮಿತಿ ಅಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ, ಪ್ರಧಾನ ಸಂಚಾಲಕ ಸಂತೋಷ್ ವಿ. ಶೆಟ್ಟಿ ಪೂನಾ, ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ವಿಧಾನ ಸಭೆಯ ಮುಖ್ಯ ಸಚೇತಕ ಸುನಿಲ್ ಕುಮಾರ್, ಶಾಸಕರಾದ ಕೆ. ರಘುಪತಿ ಭಟ್, ಯು.ಟಿ. ಖಾದರ್, ಯು. ರಾಜೇಶ್ ನಾಯ್ಕ್, ಸಂಜೀವ ಮಠಂದೂರು, ಡಿ.ವೇದವ್ಯಾಸ ಕಾಮತ್, ಎ. ಉಮಾನಾಥ ಕೋಟ್ಯಾನ್, ಹರೀಶ್ ಪೂಂಜ, ಡಾ. ವೈ ಭರತ್ ಶೆಟ್ಟಿ, ಐವನ್ ಡಿಸೋಜ, ಮಾಜಿ ಸಚಿವರಾದ ಕೆ. ಅಮರನಾಥ ಶೆಟ್ಟಿ, ಬಿ. ರಮಾನಾಥ ರೈ, ಅಭಯಚಂದ್ರ ಜೈನ್, ಪ್ರಮುಖರಾದ ಅಜಿತ್ ಕುಮಾರ್ ರೈ ಮಾಲಾಡಿ, ಐಕಳ ಹರೀಶ್ ಶೆಟ್ಟಿ, ಎ. ಸದಾನಂದ ಶೆಟ್ಟಿ, ಎ.ಜೆ. ಶೆಟ್ಟಿ, ಡಾ. ಎಂ. ಮೋಹನ ಆಳ್ವ, ಸದಾಶಿವ ಭಂಡಾರಿ, ಧರ್ಮಪಾಲ ದೇವಾಡಿಗ ಇದ್ದರು.
ಕಾರ್ಯಕ್ರಮಕ್ಕೆ ಸಾಕ್ಷಿಯಾದ ಸಿನಿಮಾ ನಟರ ದಂಡು – ಸಿನಿಮಾ ನಟರಾದ ರವಿಚಂದ್ರನ್, ಯಶ್, ಹರಿಪ್ರಿಯ, ಮಾನ್ವಿತಾ ಹರೀಶ್, ಕಾವ್ಯ ಶೆಟ್ಟಿ ಆಕರ್ಷಣೆಯ ಕೇಂದ್ರವಾಗಿದ್ದರು.
ಪ್ರವಾಹ ನಿರಾಶ್ರಿತರಿಗೆ ಸಹಾಯಧನ – ಬೆಳ್ತಂಗಡಿ ತಾಲ್ಲೂಕಿನ ಭೂ ಕುಸಿತ ಹಾಗೂ ಪ್ರವಾಹದ ನಿರಾಶ್ರಿತರಿಗೆ ₹26 ಲಕ್ಷ ದೇಣಿಗೆ ನೀಡಿದರು.
ಸಾಧಕರಿಗೆ ₹1 ಲಕ್ಷ ಮೌಲ್ಯದ ಚಿನ್ನದ ಹಾರ; ಡಾ. ಸುನೀತಾ ಶೆಟ್ಟಿ ಮುಂಬೈ, ಸಾರಾ ಅಬೂಬಕರ್, ಡಾ. ಬಿ.ಎಂ. ಹೆಗ್ಡೆ, ಜಯ ಸುವರ್ಣ, ಆರ್.ಎನ್. ಶೆಟ್ಟಿ, ಜಗನ್ನಾಥ್ ಶೆಟ್ಟಿ ಪೂನಾ, ಎಲ್.ಜಿ. ಸೋನ್ಸ್, ಶಿಮಂತೂರು ನಾರಾಯಣ ಶೆಟ್ಟಿ, ಬನ್ನಂಜೆ ಸಂಜೀವ ಸುವರ್ಣ, ಬೋಳ ಸುಬ್ಬಯ್ಯ ಶೆಟ್ಟಿ, ನಗರ ನಾರಾಯಣ ಶೆಣೈ ಮತ್ತಿತರ ಸಾಧಕರಿಗೆ ತಲಾ ₹1 ಲಕ್ಷ ಮೌಲ್ಯದ ಚಿನ್ನದ ಹಾರ ಹಾಕಿ ಸನ್ಮಾನಿಸಿದರು.
ಸಮಾರಂಭದ ಮೊದಲು ಯಕ್ಷಗಾನ ವೈಭವ ಹಾಗೂ ಆಳ್ವಾಸ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.