ರಾಜೀನಾಮೆಯ ಡ್ರಾಮಾ ನಡೆಯುತ್ತಿದೆ : ತೇಜಸ್ವಿನಿ ರಮೇಶ್ ವ್ಯಂಗ್ಯ
ಮಡಿಕೇರಿ : ರಾಜ್ಯ ಮೈತ್ರಿ ಸರ್ಕಾರದ ಶಾಸಕರು ರಾಜೀನಾಮೆಯ ಡ್ರಾಮಾ ಮಾಡುತ್ತಿದ್ದು, ಇದು ಹೊಸದೇನಲ್ಲವೆಂದು ವ್ಯಂಗ್ಯವಾಡಿರುವ ಬಿಜೆಪಿ ನಾಯಕಿ ತೇಜಸ್ವಿನಿ ರಮೇಶ್, ರಾಜ್ಯಪಾಲರು ಮಧ್ಯ ಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದ ಅಭಿವೃದ್ಧಿ ಬಗ್ಗೆ ಕಾಳಜಿ ಮತ್ತು ವಿವೇಕವಿದ್ದರೆ ಮುಖ್ಯಮಂತ್ರಿಗಳು ಸರಿಯಾದ ಮಾರ್ಗದಲ್ಲಿ ಸರಕಾರ ನಡೆಸಲಿ. ಇಲ್ಲವಾದಲ್ಲಿ ಬಿಜೆಪಿಗೆ ಅಧಿಕಾರ ಬಿಟ್ಟುಕೊಟ್ಟು ಅಭಿವೃದ್ಧಿಗೆ ಸಹಕರಿಸಲಿ ಎಂದು ಒತ್ತಾಯಿಸಿದರು.
ಮಂತ್ರಿಗಿರಿಯ ಅಧಿಕಾರದಾಸೆಯಿಂದ ಮೈತ್ರಿ ಸರಕಾರದ ಕೆಲವು ಶಾಸಕರು ಬ್ಲಾಕ್‌ಮೇಲ್ ತಂತ್ರವನ್ನು ಅನುಸರಿಸುತ್ತಿದ್ದಾರೆ. ಮೈತ್ರಿಯಲ್ಲಿ ಧರ್ಮ ಪಾಲನೆಯೇ ಇಲ್ಲ ಎಂದು ತೇಜಸ್ವಿನಿ ಆರೋಪಿಸಿದರು.
ಯಾವ ಶಾಸಕರೂ ಬಿಜೆಪಿಯ ಸಂಪರ್ಕದಲ್ಲಿಲ್ಲ, ಬಿಜಿಪಿ ಶಾಸಕರು ಮಾತ್ರ ಇದ್ದಾರೆ. ಬಿಜೆಪಿ ಎಂದಿಗೂ ಅಧಿಕಾರ ರಾಜಕರಣ ಮಾಡಿಲ್ಲ ಎಂದು ತೇಜಸ್ವಿನಿ ಸ್ಪಷ್ಟಪಡಿಸಿದರು.