ಸಂಘ ಪರಿವಾರದ ಕುತ್ಸಿತ ಮನೋಭಾವನೆ ಟಿಪ್ಪುವಿನ ಆದರ್ಶವನ್ನು ಕುಗ್ಗಿಸಲು ಸಾಧ್ಯವಿಲ್ಲ: ಎಸ್‍ಡಿಪಿಐ

ಬೆಂಗಳೂರು: ಟಿಪ್ಪು ಸುಲ್ತಾನ್ ಜನ್ಮ ಜಯಂತಿ ರದ್ದುಗೊಳಿಸಿ ಆದೇಶ ಹೊರಡಿಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರದು ದ್ವೇಷದ ರಾಜಕಾರಣ, ಅಪ್ರಬುದ್ಧ ಹಾಗೂ ಅವಿವೇಕಿತನದ ಕ್ರಮ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಎಸ್‍ಡಿಪಿಐ ಕರ್ನಾಟಕ ರಾಜ್ಯಾಧ್ಯಕ್ಷ ಇಲ್ಯಾಸ್ ಮಹಮ್ಮದ್ ತುಂಬೆ ಹೇಳಿದ್ದು, ಇಂತಹ ದ್ವೇಷ ರಾಜಕಾರಣವನ್ನು ಎಸ್‍ಡಿಪಿಐ ಕಠಿಣ ಶಬ್ದಗಳಿಂದ ಖಂಡಿಸುತ್ತದೆ ಎಂದು ಹೇಳಿದ್ದಾರೆ.
  ಇಡೀ ಜಗತ್ತಿನಲ್ಲೇ ತನ್ನ ಶೌರ್ಯ, ಎದೆಗಾರಿಕೆ ಹಾಗೂ ಆಡಳಿತ ಕ್ರಮಗಳಿಗೆ ಸುಪ್ರಸಿದ್ದವಾದ ಟಿಪ್ಪು ಸುಲ್ತಾನ್ ನಮ್ಮ ರಾಜ್ಯದ ಮಾತ್ರವಲ್ಲದೆ ದೇಶದ ಹೆಮ್ಮೆಯಾಗಿದ್ದಾರೆ. ತಂತ್ರಜ್ಞಾನ, ನೀರಾವರಿ, ಕೃಷಿ, ಕನ್ನಡ ಸಾಹಿತ್ಯ, ಸಾಮಾಜಿಕ ಸುಧಾರಣಾ ಕ್ಷೇತ್ರಗಳಲ್ಲಿ ಟಿಪ್ಪು ಸುಲ್ತಾನ್‍ರಂತಹ ಅಪ್ರತಿಮ ಕೊಡುಗೆ ನೀಡಿದ ರಾಜ ದೇಶದಲ್ಲೇ ಇನ್ನೊಬ್ಬನಿಲ್ಲ ಎಂಬುವುದು ಇತಿಹಾಸದ ಅತ್ಯಂತ ಸ್ಪಷ್ಟ ಸತ್ಯವಾಗಿದೆ. ಇಂತಹ ಕೀರ್ತಿ ಒಬ್ಬ ಮುಸ್ಲಿಮ್ ರಾಜನಿಗೆ ಸಲ್ಲುತ್ತದೆ ಎಂಬ ಏಕೈಕ ಕಾರಣಕ್ಕೆ ಸಂಘಪರಿವಾರ ಟಿಪ್ಪುವಿನ ವಿರುದ್ಧ ಸುಳ್ಳಿನ ಸರಮಾಲೆಯನ್ನು ಪ್ರಚಾರ ಮಾಡುತ್ತಿದೆ. ದೇಶದ ಇತಿಹಾಸದಲ್ಲಿ ಮುಸ್ಲಿಮ್ ರಾಜರು ಚಕ್ರವರ್ತಿಗಳ ಅಧ್ಯಾಯಗಳನ್ನು ತಿರುಚಿ ಕೋಮುವಾದದ ವೈಷಮ್ಯವನ್ನು ಬಿತ್ತುವುದು ಸಂಘಪರಿವಾರದ ಚಾಳಿಯಾಗಿದೆ.
ಇದನ್ನು ಈ ದೇಶದ ಪ್ರಜ್ಞಾವಂತ ನಾಗರಿಕರು ಚೆನ್ನಾಗಿ ಅರಿತಿದ್ದಾರೆ. ಇದರ ಮುಂದುವರಿದ ಭಾಗವಾಗಿ ಕರ್ನಾಟಕದ ಬಿಜೆಪಿ ಸರಕಾರ ಇದೀಗ ‘ಟಿಪ್ಪು ಜಯಂತಿ’ಯನ್ನು ರದ್ದು ಮಾಡಿದೆ ಎಂದು ಹೇಳಿದ್ದಾರೆ. ನಾಡಪ್ರೇಮಿ, ಕನ್ನಡದ ಕಲಿ, ಮೈಸೂರಿನ ಹುಲಿ ಟಿಪ್ಪು ಸುಲ್ತಾನರ ವಿರುದ್ಧ ಕರ್ನಾಟಕದ ಬಿಜೆಪಿ ಸರಕಾರ ಮಾಡುವ ಅಪಪ್ರಚಾರವನ್ನು ಎಸ್‍ಡಿಪಿಐ ಯಾವತ್ತೂ ಸಹಿಸಿಕೊಳ್ಳುವುದಿಲ್ಲ. ಇದರ ವಿರುದ್ಧ ಜನಾಂದೋಲನ ಮತ್ತು ಕಾನೂನು ಹೋರಾಟವನ್ನು ಮಾಡಲಿದೆ ಎಂದು ಅವರು ಹೇಳಿದ್ದಾರೆ.
ಟಿಪ್ಪುವಿನ ಆದರ್ಶ, ಜಾಣ್ಮೆ, ಶೌರ್ಯ, ನಾಡಪ್ರೇಮ, ಸಮತಾ ಮನೋಭಾವನೆ, ಹೃದಯವಂತಿಕೆಯನ್ನು ಬಿಜೆಪಿ ಮತ್ತು ಸಂಘಪರಿವಾರದ ಕುತ್ಸಿತ, ಭೃಷ್ಟ, ಸಂಕುಚಿತ ಹಾಗೂ ಕೋಮುವಾದಿ ಷಡ್ಯಂತ್ರಗಳಿಗೆ ಸೋಲಿಸಲು ಎಂದಿಗೂ ಸಾಧ್ಯವಾಗದು ಎಂದು ಎಚ್ಚರಿಸಿದ್ದಾರೆ. ಸರಕಾರಕ್ಕೆ ಸಡ್ಡು ಹೊಡೆದು ಸರಕಾರವನ್ನು ಹೊರತುಪಡಿಸಿ ರಾಜ್ಯದ ಪ್ರಜ್ಞಾವಂತರೆಲ್ಲರೂ ಒಂದಾಗಿ ಟಿಪ್ಪು ಅಕಾಡೆಮಿ ಮತ್ತು ಟಿಪ್ಪು ವಿಶ್ವ ವಿದ್ಯಾನಿಲಯವನ್ನು ಸ್ಥಾಪಿಸಬೇಕು. ಟಿಪ್ಪುವಿನ ಆದರ್ಶ, ಪ್ರಗತಿಪರತೆ, ಬುದ್ದಿ ಹಾಗೂ ಜಾತ್ಯಾತೀಯತೆಯನ್ನು ಜನಪ್ರಿಯಗೊಳಿಸಲು ನಿರಂತರವಾಗಿ ತೊಡಗಿಸಿಕೊಳ್ಳಬೇಕೆಂದು ಎಸ್‍ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮಹಮ್ಮದ್ ತುಂಬೆ ಕರೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!