ದೈವದ ಕಾರಣಿಕ: ಕಳವಿಗೆ ಬಂದಾತನಿಗೆ ನಿದ್ರೆ!


ಉಪ್ಪಿನಂಗಡಿ: ಹೆಂಚು ತೆಗೆದು ಮನೆಯೊಳಗೆ ನುಗ್ಗಿ ಕಪಾಟುಗಳ ಕೀಲಿ ಕೈಗಳನ್ನು ಜಾಲಾಡಿ ಸಂಗ್ರಹಿಸಿದ ಕಳ್ಳನೊಬ್ಬ ಅಷ್ಟರಲ್ಲಿ ನಿದ್ದೆಗೆ ಜಾರಿದ್ದಲ್ಲದೆ ಬೆಳಗ್ಗಿನ ಜಾವ ಮನೆ ಯಜಮಾನನ ಬೆತ್ತದೇಟುಬಿದ್ದ ಬಳಿಕವಷ್ಟೇ ಎಚ್ಚರಗೊಂಡ ಸ್ವಾರಸ್ಯಕರ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.


ಉಪ್ಪಿನಂಗಡಿಯ ದರ್ಶನ್ ಎಂಟರ್ ಪ್ರೈಸಸ್ ಮಾಲಕ ಸುದರ್ಶನ್ ಅವರ ಮನೆಯಲ್ಲಿ ಈ ಘಟನೆ ಸಂಭವಿಸಿದೆ. ಸುಮಾರು 24 ಅಡಿ ಎತ್ತರದ ಮಾಳಿಗೆ ಮನೆಯ ಛಾವಣಿಯನ್ನೇರಿದ ಕಳ್ಳ ಹೆಂಚುಗಳನ್ನು ತೆಗೆದು ಒಳಗಡೆ ಇಳಿದಿದ್ದ ಬಳಿಕ ಕಪಾಟುಗಳ ಕೀಲಿಕೈಗಳಿಗಾಗಿ ಮನೆಯಿಡೀ ಜಾಲಾಡಿದ್ದ ನೆಲಮಹಡಿಯ ನಡು ಕೋಣೆಯಲ್ಲಿರುವ ಟಿವಿ ಸ್ಕ್ಯಾಂಡಿನಲ್ಲಿಟ್ಟಿದ್ದ ಕೀಲಿಕ್ಕೆಗಳು ಆತನ ಕೈವಶವಾಗಿದ್ದವು. ಆದರೆ ಅದೇನಾಯಿತೋ ಅಷ್ಟರಲ್ಲಿ ಮಂಪರು ಆವರಿಸಿತು.


ಅಲ್ಲೇ ಇದ್ದ ದಿವಾನದಲ್ಲಿ ಗಾಢವಾದ ನಿದ್ರೆಗೆ ಜಾರಿದ ಕಳ್ಳ
ಮುಂಜಾನೆ ಆರು ಗಂಟೆ ಸುಮಾರಿಗೆ ಮನೆಯ ಯಜಮಾನ ಎದ್ದು ಬಂದಾಗ ಹಜಾರದಲ್ಲಿ ನಿದ್ದೆಹೋಗಿರುವ ಅಪರಿಚಿತನನ್ನು ಕಂಡು ಚಕಿತರಾದರು. ಆತ ಕಳ್ಳನೆಂಬುದು ಖಚಿತವಾದಾಗ ಬೆತ್ತದಿಂದ ಎರಡೇಟು ಬಿಗಿದು ಎಬ್ಬಿಸಿ ಪೊಲೀಸರ ವಶಕ್ಕೆ ಒಪ್ಪಿಸಿದರು.
ದೈವದ ಕಾರಣಿಕವೇ?
ಸುದರ್ಶನ್ ಅಪಾರ ದೈವ ಭಕ್ತರಾಗಿದ್ದು ಮನೆತನದ ಕಾರಣಿಕ ದೈವದ ಆರಾಧನೆಯನ್ನು ನಿಯಮಿತವಾಗಿ ನಡೆಸಿಕೊಂಡು ಬರುತ್ತಿದ್ದಾರೆ.
ಅವರು ಎಂದಿನಂತೆ ಸೋಮವಾರ ರಾತ್ರಿ 12.30ರ ಸುಮಾರಿಗೆ ಬಾಗಿಲು ಗಳನ್ನು ಭದ್ರಪಡಿಸಿ ನಿದ್ರಿಸಿದ್ದರು. ರಾತ್ರಿ ಕಳ್ಳನೊಬ್ಬ ನುಗ್ಗಿದ್ದಾಗಲೀ ಮನೆಯನ್ನು ಜಾಲಾಡಿದ್ದಾಗಲೀ ಅವರ ಅರಿವಿಗೆ ಬಂದಿರಲಿಲ್ಲ ಮುಂಜಾನೆ ಎದ್ದು ಬಂದಾಗ ಅಪರಿಚಿತ ವ್ಯಕ್ತಿ ನಿದ್ರಿಸುತ್ತಿರುವುದನ್ನು ಕಂಡು ದಿಗಿಲುಗೊಂಡರು. ಬಾಗಿಲುಗಳು ಭದ್ರವಾಗಿದ್ದರೂ ಆತ ಒಳಬಂದಿರುವುದು ಹೇಗೆಂದು ಮೊದಲಿಗೆ ತಿಳಿಯಲಿಲ್ಲ ಮಹಡಿಗೆ ಹೋಗಿ ನೋಡಿದಾಗ ಹೆಂಚುಗಳನ್ನು ತೆಗೆದಿರುವುದು ಕಂಡುಬಂತು.
ಆತನ ಮುಷ್ಟಿಯೊಳಗೆ ಕಪಾಟುಗಳ ಕೀಲಿಕೈಗಳನ್ನು ನೋಡಿದಾಗಲಂತೂ ಕಳ್ಳತನಕ್ಕೆಂದೇ ನುಗ್ಗಿದವನೆಂಬುದು ದೃಢವಾಯಿತು. ತಾನು ನಂಬಿರುವ ದೈವಗಳೇ ಆತ ನಿದ್ರಿಸುವಂತೆ ಮಾಡಿ ಕಳ್ಳತನವನ್ನು ತಡೆದಿರಬೇಕು ಎಂದು ಸುದರ್ಶನ್ ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!