ದೇಶಕ್ಕೆ ಕ್ರೈಸ್ತರ ಕೊಡುಗೆ ಅಪಾರ: ಮಾರ್ಗರೇಟ್ ಆಳ್ವಾ
ಉಡುಪಿ : ದೇಶದ ಅಭಿವೃದ್ಧಿಗೆ ಕ್ರೈಸ್ತರ ಕೊಡುಗೆ ಅಪಾರವಾದದ್ದು. ಆಸ್ಪತ್ರೆ, ವಿದ್ಯಾ ಸಂಸ್ಥೆಗಳು, ಆಶ್ರಮಗಳನ್ನು ಆರಂಭಿಸಿ ದೇಶ ಅಭಿವೃದ್ಧಿ ಹೊಂದಲು ಕಾರಣವಾಗಿದ್ದಾರೆ. ಆದರೆ ಪ್ರಸ್ತುತ ಈ ಸಮಾಜದಲ್ಲಿ ಬದುಕಲು ಸವಾಲುಗಳನ್ನು ಎದುರಿಸಬೇಕಾಗಿದೆ ಎಂದು ಮಾಜಿ ರಾಜ್ಯಪಾಲೆ ಮಾರ್ಗರೆಟ್ ಆಳ್ವಾ ಹೇಳಿದರು.
ಉದ್ಯಾವರ ಸಂತ ಫ್ರಾನ್ಸಿಸ್ ಜೇವಿಯರ್ ದೇವಾಲಯ ವ್ಯಾಪ್ತಿಯ ಭಾರತೀಯ ಕಥೋಲಿಕ್ ಯುವ ಸಂಚಲನ ಐಸಿವೈಎಂ ಉದ್ಯಾವರ ಘಟಕದ ಸುವರ್ಣ ಮಹೋತ್ಸವದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಇಂದಿನ ಸಮಾಜಕ್ಕೆ ನಮ್ಮ ಯುವಕರ ಅಗತ್ಯವಿದೆ. ಯುವಕರು ಇಂದಿನ ಸಮಾಜದಲ್ಲಿ ಯಾವ ರೀತಿ ಜೀವಿಸುತ್ತಾರೊ, ಅದರ ಮೇಲೆ ನಮ್ಮ ಸಮಾಜದ ಭವಿಷ್ಯ ರೂಪಿತವಾಗಿದೆ. ಯುವಕರು ಸಮಾಜದಲ್ಲಿ ಮುನ್ನಡೆಯುವಾಗ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಸವಾಲುಗಳನ್ನು ಧೈರ್ಯದಿಂದ ಸ್ವೀಕರಿಸಿ, ಜಾತಿ ಮತ ಭೇದವಿಲ್ಲದೆ, ಕಷ್ಟದಲ್ಲಿರುವವರ ಸೇವೆಯನ್ನು ಮಾಡುವುದರೊಂದಿಗೆ ಸಮಾಜವನ್ನು ಕಟ್ಟೋಣ ಮತ್ತು ಯುವ ಶಕ್ತಿಯನ್ನು ಬಲಿಷ್ಠಗೊಳಿಸೋಣ ಎಂದು ಮಾರ್ಗರೆಟ್ ಆಳ್ವ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಉಡುಪಿ ಧರ್ಮಾಧ್ಯಕ್ಷರಾದ ಅತೀ ವಂದನೀಯ ಜೆರಾಲ್ಡ್ ಐಸಾಕ್ ಲೋಬೊ ಮಾತನಾಡಿ, ಇಂದಿನ ನಮ್ಮ ಯುವಜನರಲ್ಲಿ ಬಹಳಷ್ಟು ಬಲವಿದೆ ಮತ್ತು ಪ್ರತಿಭೆಗಳಿವೆ. ಯುವಜನರು ಪರದೆ ಹಿಂದೆ ನಿಂತು ತಮ್ಮ ಜೀವನ ರೂಪಿತ ಮಾಡಬೇಡಿ. ಸ್ವತಂತ್ರವಾಗಿ ಕನಸನ್ನು ಕಾಣಿರಿ ಮತ್ತು ಆ ಕನಸು ನನಸಾಗಲು ಪ್ರಯತ್ನ ಮಾಡಿ. ಯುವಜನರು ಕಷ್ಟದಲ್ಲಿದ್ದಾಗ ಮತ್ತು ನೋವಿನಲ್ಲಿದ್ದಾಗ ಅವರಿಗೆ ಸ್ಪಂದಿಸಿದರೆ ಆ ಯುವಜನರು ದೇಶದ ಭವಿಷ್ಯರಾಗುತ್ತಾರೆ ಎಂದು ಹೇಳಿದರು.
ಉದ್ಘಾಟನಾ ಸಮಾರಂಭದ ಮೊದಲು ಸುವರ್ಣ ಮಹೋತ್ಸವದ ಸಂಭ್ರಮದ ದಿವ್ಯ ಬಲಿಪೂಜೆ ಉಡುಪಿ ಧರ್ಮಾಧ್ಯಕ್ಷರ ನೇತೃತ್ವದಲ್ಲಿ ನಡೆಯಿತು.
ಸಭಾ ಕಾರ್ಯಕ್ರಮದಲ್ಲಿ ಐವತ್ತು ವರ್ಷದಲ್ಲಿ ಸೇವೆ ಸಲ್ಲಿಸಿದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳನ್ನು ಹಾಗೂ ನಿರ್ದೇಶಕರುಗಳನ್ನು ಅವರ ಸೇವೆಯನ್ನು ಸ್ಮರಿಸಿ, ಸನ್ಮಾನಿಸಲಾಯಿತು.
1971ರಲ್ಲಿ ಸಿವೈಎ ಸಂಘಟನೆಯನ್ನು ಮೊದಲಾಗಿ ಉದ್ಯಾವರ ದೇವಾಲಯದಲ್ಲಿ ಪರಿಚಯಿಸಿದ ಅಂದಿನ ಸಹಾಯಕ ಧರ್ಮಗುರು ವಂದನೀಯ ಫಾ. ಹೆನ್ರಿ ಫೆರ್ನಾಡಿಸ್ ಅವರನ್ನು ಉಡುಪಿ ಧರ್ಮಪ್ರಾಂತ್ಯದ ಕುಲಪತಿ ವಂದನೀಯ ಫಾ. ಸ್ಟ್ಯಾನಿ ಬಿ ಲೋಬೊ ಸುವರ್ಣ ಮಹೋತ್ಸವ ಸಮಿತಿಯ ಪರವಾಗಿ ಸನ್ಮಾನಿಸಿದರು.
ವೇದಿಕೆಯಲ್ಲಿ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಉಡುಪಿ ವಲಯದ ಪ್ರಧಾನ ಧರ್ಮಗುರು ವಂದನೀಯ ಫಾ ವಲೇರಿಯನ್ ಮೆಂಡೋನ್ಸಾ, ಸ್ಥಾಪಕ ನಿರ್ದೇಶಕ ವಂದನೀಯ ಫಾ ಹೆನ್ರಿ ಫೆರ್ನಾಡಿಸ್, ದೇವಾಲಯದ ಸಹಾಯಕ ಧರ್ಮಗುರು ವಂದನೀಯ ಫಾ ರಾಲ್ವಿನ್ ಆರನ್ನ,ಕರಾವಳಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಿವೇದಿತ್ ಆಳ್ವಾ, ಕರ್ನಾಟಕ ಪ್ರಾಂತೀಯ ಯುವ ಆಯೋಗದ ಅಧ್ಯಕ್ಷ ಜೈಸನ್ ಪಿರೇರಾ, ಪಾಲನಾ ಮಂಡಳಿಯ ಉಪಾಧ್ಯಕ್ಷ ಮೆಲ್ವಿನ್ ನೋರನ್ನ, ಸುವರ್ಣ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ನೊರ್ಬಟ್ ಕ್ರಾಸ್ಟಾ, ಕಾರ್ಯಕ್ರಮಗಳ ಸಂಚಾಲಕ ಸ್ಟೀವನ್ ಕುಲಾಸೊ, ಐಸಿವೈಎಂ ಉದ್ಯಾವರ ಘಟಕಾಧ್ಯಕ್ಷ ರೊಯಲ್ ಕಾಸ್ತೆಲಿನೋ, ಕಾರ್ಯದರ್ಶಿ ಪ್ರಿಯಾಂಕಾ ಡಿಸೋಜಾ ಉಪಸ್ಥಿತರಿದ್ದರು.
ಉಡುಪಿ ಧರ್ಮಪ್ರಾಂತ್ಯದ ಕುಲಪತಿ ಸಂತ ಫ್ರಾನ್ಸಿಸ್ ಜೇವಿಯರ್ ದೇವಾಲಯದ ಪ್ರಧಾನ ಧರ್ಮಗುರು ವಂದನೀಯ ಫಾ. ಸ್ಟ್ಯಾನಿ ಬಿ ಲೋಬೊ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷ ಮೈಕಲ್ ಡಿಸೋಜಾ ಸ್ವಾಗತಿಸಿದರೆ, ಪ್ರಧಾನ ಕಾರ್ಯದರ್ಶಿ ಡೋರಾ ಅರೋಜಾ ವಂದಿಸಿದರು. ಐಸಿವೈಎಂ ಸದಸ್ಯರಾದ ಜೇನ್ ಡಿಸೋಜಾ ಮತ್ತು ಎಲ್ಸನ್ ಅಂದ್ರಾದೆ ಕಾರ್ಯಕ್ರಮ ನಿರ್ವಹಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಬೆವಾರಿಸ್ ಕೊಂಕಣಿ ಹಾಸ್ಯಮಯ ನಾಟಕ ಪ್ರದರ್ಶನವಾಯಿತು.