ಉದ್ಯೋಗ ಕೇಳಿದರೆ ಕೇಂದ್ರ ಸರ್ಕಾರ ಚಂದ್ರನನ್ನು ತೋರಿಸುತ್ತದೆ: ರಾಹುಲ್
ಲಾಥೂರ್: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದೇಶದ ಆರ್ಥಿಕತೆಯನ್ನು ನಾಶ ಮಾಡುತ್ತಿದೆ. ಮುಂದಿನ ಕೆಲವು ತಿಂಗಳುಗಳಲ್ಲಿ ಇದು ಮತ್ತಷ್ಟು ಹದಗೆಡಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಭಾನುವಾರ ಮಹಾರಾಷ್ಟ್ರದ ಲಾಥೂರ್ ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆಗಾಗಿ ಕಾಂಗ್ರೆಸ್ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದ ರಾಹುಲ್, ದೇಶದ ಆರ್ಥಿಕತೆ ಮುಂದಿನ ಆರೇಳು ತಿಂಗಳಲ್ಲಿ ಮತ್ತಷ್ಟು ಕೆಟ್ಟ ಸ್ಥಿತಿಗೆ ತಲುಪಲಿದೆ. ದೇಶದಲ್ಲಿನ ನಿಜವಾದ ಸಮಸ್ಯೆ ಬಗ್ಗೆ ಮಾತನಾಡುವುದರ ಬದಲು ಮೋದಿ ಮತ್ತು ಅವರ ಪಕ್ಷ ಸಂವಿಧಾನದ 370ನೇ ವಿಧಿ ಮತ್ತು ಚಂದ್ರಯಾನದ ಬಗ್ಗೆ ಮಾತನಾಡಿ ಜನರ ಗಮನವನ್ನು ಬೇರೆಡೆಗೆ ಸೆಳೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಈಗಷ್ಟೇ ಸಮಸ್ಯೆ ಆರಂಭವಾಗಿದೆ. ಕಾಂಗ್ರೆಸ್ ಮತ್ತು ಮನಮೋಹನ್ ಸಿಂಗ್ ಅವರು ದೇಶದ ಆರ್ಥಿಕತೆ ಸುಧಾರಿಸಲು ಹಲವು ವರ್ಷ ದುಡಿದಿದ್ದರು. ಆದರೆ ಈಗ ಆರ್ಥಿಕತೆಯನ್ನು ನಾಶ ಮಾಡಲಾಗುತ್ತಿದೆ. ಬಿಜೆಪಿಯವರು ಸಮಸ್ಯೆ ಬಗ್ಗೆ ಏನೂ ಹೇಳುವುದಿಲ್ಲ. ಆದರೆ ಜನರ ಗಮನವನ್ನು ಬೇರೆಡೆಗೆ ಸೆಳೆಯುತ್ತಾರೆ.
ಆರ್ಥಿಕ ಹಿಂಜರಿತವುಂಟಾಗುತ್ತಿದ್ದಂತೆ ವಿಶ್ವ ಬ್ಯಾಂಕ್ 2018-2019ರ ಅವಧಿಯಲ್ಲಿ ಭಾರತದ ನಿರೀಕ್ಷಿತ ಅಭಿವೃದ್ಧಿ ದರವನ್ನು ಶೇ. 6.9ರಿಂದ ಶೇ. 6ಕ್ಕೆ ಇಳಿಸಿದರ ಬೆನ್ನಲ್ಲೇ ರಾಹುಲ್ ಗಾಂಧಿ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಚಂದ್ರಯಾನ ಸಾಧನೆಗಾಗಿ ಇಸ್ರೊ ಹಲವಾರು ವರ್ಷಗಳ ಶ್ರಮವಹಿಸಿತ್ತು. ಆದರೆ ಆ ಸಾಧನೆಯ ಹೆಗ್ಗಳಿಕೆಯನ್ನು ಮೋದಿ ಪಡೆಯುತ್ತಿದ್ದಾರೆ. ಯುವ ಜನರು ಉದ್ಯೋಗ ಕೇಳಿದರೆ ಸರ್ಕಾರ ಚಂದ್ರನನ್ನು ತೋರಿಸುತ್ತದೆ ಎಂದಿದ್ದಾರೆ ರಾಹುಲ್.
ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಅವರನ್ನು ಮೋದಿ ಭೇಟಿ ಮಾಡಿದಾಗ ಕಳೆದ ವರ್ಷ ಡೋಕ್ಲಾಂನಲ್ಲಿ ಚೀನಾ ಸೇನೆ ನುಸುಳುವಿಕೆ ನಡೆಸಿದ್ದರ ಬಗ್ಗೆ ಯಾಕೆ ಕೇಳಲಿಲ್ಲ ಎಂದು ರಾಹುಲ್ ಪ್ರಶ್ನಿಸಿದ್ದಾರೆ.