ಪ್ರತಿಭಟನೆ ಹತ್ತಿಕ್ಕಲು ಕೇಂದ್ರ ಸರ್ಕಾರ ಕಾನೂನನ್ನು ದುರ್ಬಳಕೆ ಮಾಡುತ್ತಿದೆ: ಸೊರಕೆ
ಉಡುಪಿ: ಅಸಾಂವಿಧಾನಿಕ ಪೌರತ್ವ (ತಿದ್ದುಪಡಿ) ಕಾಯ್ದೆವಿರುದ್ಧ ದೇಶದಾದ್ಯಂತ ಭುಗಿಲೆದ್ದಿರುವ ಪ್ರತಿಭಟನೆಯನ್ನು ಕೇಂದ್ರ ಸರ್ಕಾರ ಹತ್ತಿಕ್ಕಲು ಕಾನೂನನ್ನು ದುರ್ಬಳಕೆ ಮಾಡುತ್ತಿದೆ ಎಂದು ಕಾಂಗ್ರೆಸ್ ಮುಖಂಡ ವಿನಯ್ ಕುಮಾರ ಸೊರಕೆ ಆರೋಪಿಸಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹತ್ವದ ಕಾಯ್ದೆಗಳಿಗೆ ತಿದ್ದುಪಡಿ ತರುವ ಮುನ್ನ ಸಂಸತ್ತಿನಲ್ಲಿ ಚರ್ಚೆಯಾಗಬೇಕು. ಸರ್ವ ಪಕ್ಷ ಮುಖಂಡರ ಸಭೆ ಕರೆದು ಅಭಿಪ್ರಾಯ ಸಂಗ್ರಹಿಸಬೇಕು. ಈ ಸಂಪ್ರದಾಯಕ್ಕೆ ಎಳ್ಳುನೀರು ಬಿಟ್ಟಿರುವ ಬಿಜೆಪಿ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ ಎಂದು ಟೀಕಿಸಿದರು. ಏಕಾಏಕಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸುತ್ತಿರುವುದು ಸಂವಿಧಾನದ ಆತ್ಮದ ಮೇಲೆ ಪ್ರಹಾರ ಮಾಡಿದಂತಾಗಿದೆ. ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಕಾನೂನಿನ ಅಸ್ತ್ರ ಬಳಸಿಕೊಂಡು ಪ್ರತಿಭಟನಾಕಾರರ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ ಎಂದರು. ಎನ್‌ಆರ್‌ಸಿ ವಿರುದ್ಧ ಪ್ರತಿಭಟನೆಗಳಿದಿರುವ ನಾಗರಿಕರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗುತ್ತಿದೆ. ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ನುಗ್ಗಿ ಪೊಲೀಸರು ದಾಂಧಲೆ ನಡೆಸುತ್ತಿದ್ದಾರೆ. ಮಂಗಳೂರಿನಲ್ಲಿ ನಡೆದ ಗೋಲಿಬಾರ್ ಕೂಡ ಪೂರ್ವ ನಿಯೋಜಿತದಂತೆ ಕಾಣುತ್ತಿದೆ ಎಂದು ಆರೋಪಿಸಿದರು. ಗೋಲಿಬಾರ್‌ನಲ್ಲಿ ಮೃತಪಟ್ಟ ಕುಟುಂಬಗಳಿಗೆ ಸಾಂತ್ವನ ಹೇಳಲು ಬಂದ ಕಾಂಗ್ರೆಸ್ ಮುಖಂಡರ ನಿಯೋಗವನ್ನು ವಿಮಾನ ನಿಲ್ದಾಣದಲ್ಲಿ ತಡೆದಿದ್ದು ಖಂಡನೀಯ. ಅಧಿಕಾರಿಗಳು ಸಹ ಸರ್ಕಾರವನ್ನು ತೃಪ್ತಿಪಡಿಸಲು ಹೊರಟಿದ್ದಾರೆ ಎಂದು ಸೊರಕೆ ಟೀಕಿಸಿದರು. ಪೌರತ್ವ ಕಾಯ್ದೆಯಡಿ ಬಾಂಗ್ಲಾದೇಶ, ಅಫ್ಗಾನಿಸ್ತಾನ, ಪಾಕಿಸ್ತಾನದಿಂದ ಬರುವ ಹಿಂದೂ, ಕ್ರಿಶ್ಚಿಯನ್, ಬೌದ್ಧ, ಪಾರ್ಸಿ, ಜೈನ ಅಕ್ರಮ ವಲಸಿಗರಿಗೆ ಪೌರತ್ವ ನೀಡಲು ಉದ್ದೇಶಿಸಲಾಗಿದೆ. ಆದರೆ, ಮುಸ್ಲಿಮರನ್ನು ಮಾತ್ರ ಪೌರತ್ವದಿಂದ ಹೊರಗಿಡಲಾಗಿದೆ ಎಂದರು. ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮಾತನಾಡಿ, ಧರ್ಮದ ಆಧಾರದಲ್ಲಿ ರೂಪಿತವಾದಮಸೂದೆ ಸಂವಿಧಾನದ ತತ್ವಗಳಿಗೆ ವಿರುದ್ಧವಾಗಿದೆ. ದೇಶದಲ್ಲಿ ಎಲ್ಲ ಧರ್ಮದವರು ವಾಸಿಸಲು ಅವಕಾಶವಿದೆ. ಬಿಜೆಪಿ ಇದನ್ನು ಅರ್ಥಮಾಡಿಕೊಳ್ಳಬೇಕು’ ಎಂದರು. ಹಿಂದೆ ಯಡಿಯೂರಪ್ಪ ಸರ್ಕಾರ ಅಧಿಕಾರಕ್ಕೆ ಬಂದಾಗ ಇಬ್ಬರು ರೈತರ ಗೋಲಿಬಾರ್ ನಡೆದಿತ್ತು. ಈಗ ಇಬ್ಬರು ನಾಗರಿಕರನ್ನು ಹತ್ಯೆ ಮಾಡಲಾಗಿದೆ. ವಿವಾದಿತ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಕಾಂಗ್ರೆಸ್ ಮುಖಂಡರಾದ ಕಿಶನ್ ಹೆಗ್ಡೆ ಕೊಳ್ಕೆಬೈಲು, ಹರೀಶ್ ಕಿಣಿ, ಭಾಸ್ಕರ್ ರಾವ್ ಕಿದಿಯೂರು, ನರಸಿಂಹ ಮೂರ್ತಿ ,ಪ್ರಖ್ಯಾತ್ ಶೆಟ್ಟಿ ಉಪಸ್ಥಿತರಿದ್ದರು. |