ಬಾಂಬ್ ಪ್ರಕರಣದಲ್ಲಿ ಇಲಾಖೆ ಟೀಕೆ ಮಾಡಲು ಯಾವುದೇ ಕಾರಣ ಇಲ್ಲ: ಬೊಮ್ಮಾಯಿ
ಉಡುಪಿ : ಆದಿತ್ಯರಾವ್ ಏರ್ ಪೋರ್ಟ್ ಗೆ ಬಾಂಬ್ ಇರಿಸಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಇಲಾಖೆಯನ್ನು ಟೀಕೆ ಮಾಡಲು ಯಾವುದೇ ಕಾರಣಗಳೂ ಇಲ್ಲ. ಯಾರೇ ತಪ್ಪಿತಸ್ಥರಾದರೂ ನ್ಯಾಯ ಸಮ್ಮತ ತನಿಖೆ ಮಾಡ್ತೇವೆ.ಈ ಬಗ್ಗೆ ನಾನು ಮೊದಲ ದಿನವೇ ಹೇಳಿದ್ದೆ. ಯಾವುದೇ ಸಂಘಟನೆ ಅಥವಾ ವ್ಯಕ್ತಿಯ ಮೇಲೂ ನಾನು ದೋಷಾರೋಪ ಮಾಡಿರಲಿಲ್ಲ.
ಪೊಲೀಸರ ತನಿಖೆಗೆ ಹೆದರಿಯೇ ಆತ ಸರಂಡರ್ ಆಗಿದ್ದಾನೆ. ಈ ಪ್ರಕರಣದಲ್ಲಿ ನಿಷ್ಪಕ್ಷಪಾತ ಮತ್ತು ದಕ್ಷತೆಯಿಂದ ತನಿಖೆಯಾಗಿದ್ದರಿಂದಲೇ ಆರೋಪಿ ಪತ್ತೆಯಾಗಿದ್ದಾನೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.ಉಡುಪಿಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು ,ಅಪರಾಧ ಅಪರಾಧವೇ. ಅಪರಾಧಿ ಅಪರಾಧಿಯೇ ಅನ್ನೋದು ನಮ್ಮ ನಂಬಿಕೆ.
ಈ ವಿಷಯದಲ್ಲಿ ಮೊಸರಲ್ಲಿ ಕಲ್ಲು ಹುಡುಕುವ ಕೆಲಸವನ್ನು ಯಾರೂ ಮಾಡಬಾರದು ಎಂದು ಮನವಿ ಮಾಡಿದರು. ಸಚಿವ ಸಂಪುಟ ಗೊಂದಲ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಎಲ್ಲಾ ವಿಚಾರ ಮುಖ್ಯಮಂತ್ರಿಗಳ ಗಮನದಲ್ಲಿದೆ. ಮುಖ್ಯಮಂತ್ರಿಗಳು ಸೂಕ್ತ ಚಿಂತನೆ ಮಾಡ್ತಾರೆ. ಸಂಪುಟ ವಿಸ್ತರಣೆಯ ಸಂಪೂರ್ಣ ಅಧಿಕಾರ ಸಿಎಂಗಿದೆ.ವರಿಷ್ಟರ ಜೊತೆಗೆ ಚರ್ಚೆ ಮಾಡಿ,ಸೂಕ್ತ ಕ್ರಮ ಜರುಗಿಸ್ತಾರೆ ಎಂದರು. ಪೇಜಾವರ ಸ್ವಾಮೀಜಿಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ಸಿಕ್ಕಿದ್ದಕ್ಕೆ ಗೃಹ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅಭಿನಂದನೆ ಸಲ್ಲಿಸಿದ್ರು.
ಅತೀ ಹೆಚ್ಚುಬಾರಿ ಕೃಷ್ಣ ಪೂಜೆ ಮಾಡಿದ ಶ್ರೇಷ್ಟ ಗುರುಗಳು ಪೇಜಾವರ ಶ್ರೀಗಳು. ದೇಶಾದ್ಯಂತ ಸಂಚರಿಸಿ ಧರ್ಮಜಾಗೃತಿ ಮೂಡಿಸಿದ ಕೀರ್ತಿ ಅವರದ್ದು. ಅಸ್ಪಷ್ಯತೆ ದೂರ ಮಾಡಿದವರಲ್ಲಿ ಪೇಜಾವರ ಸ್ವಾಮೀಜಿ ಪ್ರಮುಖರು. ಅವರೊಬ್ಬ ಶಾಂತಿಧೂತ.ಅವರ ವಿಚಾರಗಳಿಗೆ ಗೌರವ ಕೊಟ್ಟು, ಶ್ರೀಗಳ ಮಾರ್ಗದಲ್ಲಿ ನಡೆಯೋಣ ಎಂದರು.ಬಿಜೆಪಿ ದೇಶಾದ್ಯಂತ ಸಿಎಎ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡ್ತಿದೆ ಎಂದ ಸಚಿವರು,ನಾಳೆ ರಾಜನಾಥ್ ಸಿಂಗ್ ಮಂಗಳೂರಿಗೆ ಬರ್ತಿದ್ದಾರೆ.ಮಂಗಳೂರು ಹೊರವಲಯದಲ್ಲಿ ಜಾಗೃತಿ ಸಮಾವೇಶ ನಡೆಯುತ್ತೆ.ಶಾಂತಿ, ಕಾನೂನು ಸುವ್ಯವಸ್ಥೆಗೆ ನಮ್ಮ ಇಲಾಖೆ ಎಲ್ಲಾ ಕ್ರಮ ಕೈಗೊಂಡಿದೆ ಎಂದು ಹೇಳಿದರು.