ಉಪಚುನಾವಣೆಯಲ್ಲಿ ಹೀನಾಯ ಸೋಲು: ಕಾಂಗ್ರೆಸ್‌ನಲ್ಲಿ ರಾಜಿನಾಮೆ ಪರ್ವ
ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ರಾಜಿನಾಮೆ ನೀಡಿದ್ದ ಬೆನ್ನಲ್ಲೇ ಇದೀಗ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜಿನಾಮೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ್ ಅವರು ಉಪಚುನಾವಣೆಯಲ್ಲಿ ಗೆಲ್ಲಲು ಶಕ್ತಿ ಮೀರಿ ಪ್ರಯತ್ನ ಮಾಡಿದ್ದೇವು. ಪ್ರಜಾಪ್ರಭುತ್ವದಲ್ಲಿ ಜನರ ತೀರ್ಪನ್ನು ನಾನು ಗೌರವಿಸುತ್ತೇನೆ. ಹೀಗಾಗಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲಿನ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿರುವುದಾಗಿ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಕಳೆದ ಲೋಕಸಭೆ ಚುನಾವಣೆ ವೇಳೆಯೂ ನಾನೇ ಕೆಪಿಸಿಸಿ ಅಧ್ಯಕ್ಷ ಹುದ್ದೆಯಲ್ಲಿದ್ದೆ. ಅಂದು ಸಹ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ಫಲಿತಾಂಶ ಸಿಕ್ಕಿರಲಿಲ್ಲ. ಇದೀಗ ಉಪ ಚುನಾವಣೆಯಲ್ಲೂ ಪಕ್ಷ ಹೀನಾಯ ಸೋಲು ಕಂಡಿದೆ ಎಂದರು.
ಇನ್ನು ತಮ್ಮ ರಾಜಿನಾಮೆ ಪತ್ರವನ್ನು ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ರವಾನಿಸಿರುವುದಾಗಿ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿದ್ದರಾಮಯ್ಯ ಅವರು, ರಾಜ್ಯದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಂದುಕೊಂಡಷ್ಟು ಫಲಿತಾಂಶ ನೀಡುವುದರಲ್ಲಿ ಸೋತಿದೆ. ಹೀಗಾಗಿ ರಾಜ್ಯದಲ್ಲಿ ಪಕ್ಷದ ಹಿತದೃಷ್ಠಿಯಿಂದ ನಾನು ಸಿಎಲ್‌ಪಿ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದೇನೆ ಎಂದು ಹೇಳಿದರು.
ಸಿಎಲ್‌ಪಿ ನಾಯಕನಾಗಿ ನಾನು ಕೆಲವೊಂದು ಮೌಲ್ಯಗಳನ್ನು ಎತ್ತಿ ಹಿಡಿಯಬೇಕು. ನಾನು ಸಾಕಷ್ಟು ಪ್ರಯತ್ನ ಪಟ್ಟು ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸಿದ್ದೇನೆ ಅದು ಸಾಧ್ಯವಾಗಿಲ್ಲ. ಹೀಗಾಗಿ ಸೋಲಿನ ಹೊಣೆಯನ್ನು ನಾನೇ ಹೊರುತ್ತೇನೆ ಎಂದರು.
15 ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಪ್ರದರ್ಶನ ನೀಡಿದ್ದು ಕೇವಲ 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ