ಬಜ್ಪೆ: ಬಾಂಬ್ ಸ್ಫೋಟಗೊಳಿಸಿ ನಿಷ್ಕ್ರಿಯ
ಮಂಗಳೂರು: ಬಜ್ಪೆ ವಿಮಾನ ನಿಲ್ದಾಣದಲ್ಲಿ ಪತ್ತೆಯಾದ 10 ಕೆಜಿ ತೂಕವುಳ್ಳ ಸಜೀವ ಬಾಂಬ್ ಅನ್ನು ಸ್ಫೋಟಗೊಳಿಸಿ ನಿಷ್ಕ್ರಿಯಗೊಳಿಸಲಾಯ್ತು. 12 ಅಡಿ ಆಳದಲ್ಲಿ ಬಾಂಬ್ ಸ್ಫೋಟಿಸಿರುವದರಿಂದ ಅದರ ತೀವ್ರತೆ ಅಷ್ಟಾಗಿ ಕಾಣಿಸಿಕೊಂಡಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಒಂದು ವೇಳೆ ವಿಮಾನ ನಿಲ್ದಾಣ ಅಥವಾ ಬಯಲಿನಲ್ಲಿ ಈ ಬಾಂಬ್ ಸ್ಫೋಟಗೊಂಡಿದ್ದರೆ ಸುಮಾರು 500 ಮೀಟರ್ ವ್ಯಾಪ್ತಿಯ ಪ್ರದೇಶ ಹಾನಿ ಆಗುವ ಸಾಧ್ಯತೆಗಳಿದ್ದವು. ಈ ಹಿನ್ನೆಲೆಯಲ್ಲಿ ಬಾಂಬ್ ನಿಷ್ಕ್ರಿಯ ದಳ 12 ಅಡಿ ಆಳದಲ್ಲಿರಿಸಿ ಸ್ಫೋಟಿಸಿದೆ.
ಮಧ್ಯಾಹ್ನದ ಬಳಿಕ 2 ಕಿಲೋಮೀಟರ್ ದೂರದಲ್ಲಿರುವ ಕೆಂಜಾರು ಮೈದಾನಕ್ಕೆ ಬಾಂಬ್ ಪ್ರತಿರೋಧಕ ವಾಹನವನ್ನು ಎಚ್ಚರಿಕೆಯಿಂದ ಸಾಗಿಸಲಾಗಿತ್ತು. ನಿರಂತರ 2 ಗಂಟೆ ಪ್ರಯತ್ನ ಮಾಡಿ ಕೂಡ ಬಾಂಬ್ ನಿಷ್ಕ್ರಿಯಗೊಳಿಸಲು ಸಾಧ್ಯವಾಗಲೇ ಇಲ್ಲ. ಕೊನೆಗೆ ಇದು ಸಾಧ್ಯವಾಗದಿದ್ದಾಗ ಸಂಜೆಯ ಹೊತ್ತಿಗೆ 12 ಅಡಿ ಆಳದ ಗುಂಡಿಯಲ್ಲಿ ಮರಳು ಚೀಲಗಳನ್ನು ಇಟ್ಟು ಅದರ ಮಧ್ಯೆ ಬಾಂಬ್ ಇರಿಸಿ, ರಿಮೋಟ್ ಮೂಲಕ ಸ್ಫೋಟಿಸಲಾಯ್ತು. ಇದರ ಜೊತೆಗೆ ವಿಮಾನ ನಿಲ್ದಾಣದಲ್ಲಿ ಮತ್ತೆರಡು ಬಾಂಬ್ ಇರಿಸಲಾಗಿದೆ ಎಂಬ ಹುಸಿ ಕರೆಯಿಂದ ಆತಂಕ ಎದುರಾಗಿತ್ತು. ಒಂದು ವಿಮಾನದ ಹಾರಾಟ ಕೂಡ ರದ್ದುಗೊಳಿಸಲಾಯಿತು.
ಶೀಘ್ರವೇ ಪ್ರಕರಣ ಬೇಧಿಸುತ್ತೇವೆ: ಡಾ.ಹರ್ಷ
ಮಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿರುವ ಸಜೀವ ಬಾಂಬ್ ಪ್ರಕರಣವನ್ನು ಶೀಘ್ರವೇ ಬೇಧಿಸಲಾಗುತ್ತದೆ, ಆರೋಪಿಗಳಿಗೆ ಕಾನೂನು ಪ್ರಕಾರ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ. ಹರ್ಷ ಹೇಳಿದ್ದಾರೆ.
ಬಾಂಬ್ ಪತ್ತೆ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದ ಪೋಲೀಸ್ ಆಯುಕ್ತರು “ವಿಮಾನ ನಿಲ್ದಾನದಲ್ಲಿ ಸ್ಪೋಟಕವನ್ನು ತಂದಿಟ್ಟಿರುವ ಶಂಕಿತ ವ್ಯಕ್ತಿಯ ಚಿತ್ರ ಸಿಕ್ಕಿದೆ ಎಲ್ಲಾ ಆಯಾಮಗಳಿಂದ ತನಿಖೆ ನಡೆಸಲಾಗುತ್ತದೆ” ಎಂದಿದ್ದಾರೆ.
ಪ್ರಕರಣ ಬೇಧಿಸಲು ಮೂರು ತಂಡಗಳನ್ನು ರಚನೆ ಮಾಡುತ್ತಿದ್ದು ಶಂಕಿತನ ಮಾಹಿತಿ ಕಲೆಹಾಕುವ ಕಾರ್ಯ ನಡೆದಿದೆ.ಇದಾಗಲೇ ಸಾಕಷ್ಟು ಸುಳಿವುಗಳು ಸಿಕ್ಕಿದ್ದು ಶೀಘ್ರವೇ ಪ್ರಕರಣ ಬೇಧಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.