ಬಿಜೆಪಿ ಜನರ ತಲೆಗೆ ಸುಳ್ಳುಗಳನ್ನು ತುಂಬಿ ಅಧಿಕಾರಕ್ಕೆ ಬಂದಿದೆ: ಸಿದ್ದರಾಮಯ್ಯ
ಉಡುಪಿ: ಅಜ್ಜರಕಾಡು ಪುರಭವನದಲ್ಲಿ ಬುಧವಾರ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಸಿದ್ದರಾಮಯ್ಯ ಕಾರ್ಯಕರ್ತರಿಗೆ ಶಿಕ್ಷಕರಾಗಿ ಪಾಠ ಮಾಡಿ , ಬಿಜೆಪಿಯ ದುರಾಡಳಿತ ಜನರಿಗೆ ಮುಟ್ಟಿಸಿ ಎಂದು ಕೈ ಮುಗಿದು ಕಾಂಗ್ರೆಸ್ ಪಕ್ಷ ಸಂಘಟನೆ ಮಾಡಲು ಮನವಿ ಮಾಡಿಕೊಂಡರು.
ಸಂವಿಧಾನಕ್ಕೆ 73 ಹಾಗೂ74 ನೇ ತಿದ್ದುಪಡಿ ತರುವ ಮೂಲಕ ಮಹಿಳೆಯರಿಗೆ, ಪಂಚಾಯ್ತಿಗಳಿಗೆ ಮೀಸಲಾತಿ ಕಲ್ಪಿಸಲಾಯಿತು. ಆಗ ಪ್ರಧಾನಿಯಾಗಿದ್ದು ಯಾರು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಯಾರೂ ಉತ್ತರ ಕೊಡದಿದ್ದಾಗ ನರಸಿಂಹರಾವ್ ಎಂದು ಅವರೇ ಉತ್ತರ ನೀಡಿದರು.
ಕರ್ನಾಟಕಕ್ಕೆ ರೇಷ್ಮೆ ಪರಿಚಯಿಸಿದವರು ಯಾರು ? ರಾಕೆಟ್ ತಂತ್ರಜ್ಞಾನ ಪರಿಚಯಿಸಿದವರು ಯಾರು ಎಂದು ಪ್ರಶ್ನಿಸಿದರು. ಇದಕ್ಕೂ ಉತ್ತರ ಬಾರದಿದ್ದಾಗ, ಟಿಪ್ಪು ಸುಲ್ತಾನ್, ನೆನಪಿಟ್ಟುಕೊಳ್ಳಿ ಎಂದರು.
ಜನಸಂಘ, ಆರ್‌ಎಸ್‌ಎಸ್, ಬಿಜೆಪಿ ಹುಟ್ಟಿದ್ದು ಯಾವಾಗ, ಸ್ಥಾಪಿಸಿದ್ದು ಯಾರು ಎಂದು ಸಾಲು ಸಾಲು ಪ್ರಶ್ನೆ ಹಾಕಿದರು. ಕಾರ್ಯಕರ್ತರು ತಪ್ಪು ಉತ್ತರ ನೀಡಿದಾಗ, ಇಸವಿ ಸಹಿತ ಉತ್ತರ ನೀಡಿ ಇತಿಹಾಸ, ಚರಿತ್ರೆಯನ್ನು ಮೊದಲು ಓದಿ ಎಂದು ಕಿವಿಮಾತು ಹೇಳಿದರು.
ಟಿಪ್ಪು ಆಗ ವೀರ, ಈಗ ಮತಾಂಧ .
ಪಠ್ಯದಿಂದ ಟಿಪ್ಪು ಸುಲ್ತಾನ್ ಇತಿಹಾಸವನ್ನು ತೆಗೆದುಹಾಕಲು ಬಿಜೆಪಿ ಯತ್ನಿಸುತ್ತಿದೆ. ಆದರೆ, ಟಿಪ್ಪು ಹಾಗೂ ಹೈದರಾಲಿಯ ಹೆಸರಿಲ್ಲದೆ ಮೈಸೂರು ಚರಿತ್ರೆ ಸಂಪೂರ್ಣವಾಗುವುದಿಲ್ಲ. ಯಡಿಯೂರಪ್ಪ ಕೆಜೆಪಿ ಅಧ್ಯಕ್ಷರಾಗಿದ್ದಾಗ ಟಿಪ್ಪು ವೇಷಧರಿಸಿ ನಾನೇ ಟಿಪ್ಪು ಎಂದು ಸಂಭ್ರಮಿಸಿದ್ದರು. ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ಮೈಸೂರಿನ ಶೇಖ್ ಅಲಿ ಅವರು ಬರೆದ ಟಿಪ್ಪು ದ ಕ್ರುಸೇಡರ್ ಪುಸ್ತಕಕ್ಕೆ ಮುನ್ನುಡಿ ಬರೆದು ಟಿಪ್ಪು ದೇಶಪ್ರೇಮಿ, ದೇಶಭಕ್ತ, ಬ್ರಿಟಿಷರ ವಿರುದ್ಧ ಹೋರಾಡಿದ ವೀರ ಎಂದು ಹೊಗಳಿದ್ದಾರೆ.
ಈಗ ಬಿಜೆಪಿ ನಾಯಕರಿಗೆ ಟಿಪ್ಪು ಮತಾಂಧನಾಗಿದ್ದಾನೆ ಎಂದು ಜರಿದರು.
ಮತದಾರರಿಗೆ ಬಿಜೆಪಿ ಭ್ರಮನಿರಸನ ಮಾಡಿದೆ. ಬಿಜೆಪಿಗೆ ಪರ್ಯಾಯ ಕಾಂಗ್ರೆಸ್ ಪಕ್ಷ ಮಾತ್ರ ಎಂಬ ಭಾವನೆ ಮೂಡುತ್ತಿದೆ. ಸಂವಿಧಾನ, ಪ್ರಜಾಪ್ರಭುತ್ವ ಉಳಿಯಬೇಕಾದರೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೇರಬೇಕು. ಇದಕ್ಕೆ ಕಾರ್ಯಕರ್ತರ ಬಲ ಬೇಕು ಎಂದು ಸಿದ್ದರಾಮಯ್ಯ ಹೇಳಿದರು.
ಕರಾವಳಿಯಲ್ಲಿ ಕಾಂಗ್ರೆಸ್ ಬಲ ಕುಂದಿರುವುದು ಸತ್ಯ. ಹಿಂದೆ ಉಳ್ಳಾಲದಿಂದ ಉಡುಪಿವರೆಗೆ ಮಾಡಿದ್ದ ಸದ್ಭಾವನಾ ಯಾತ್ರೆಯನ್ನು ಮತ್ತೊಮ್ಮೆ ಮಾಡಿ ಪಕ್ಷವನ್ನು ಬಲಪಡಿಸಲು ಮತ್ತೆ ಯಾತ್ರೆ ಮಾಡುವ ಎಂದರು.
ಬಿಜೆಪಿ ಸುಳ್ಳಿನ ಪಕ್ಷ. ಜನರ ತಲೆಗೆ ಸುಳ್ಳುಗಳನ್ನು ತುಂಬಿ ಅಧಿಕಾರಕ್ಕೆ ಬಂದಿದ್ದಾರೆ. ಸಿದ್ದರಾಮಯ್ಯ, ರಾಹುಲ್ ಗಾಂಧಿ ಮುಸ್ಲಿಮರ ಪರ, ಹಿಂದೂ ವಿರೋಧಿಗಳು ಎಂದು ಬಿಂಬಿಸಿದ್ದಾರೆ. ನಾವು ಬಿಜೆಪಿಗರಂತೆ ಡೋಂಗಿ ಹಿಂದುಗಳಲ್ಲ, ಅಪ್ಪಟ ಹಿಂದೂಗಳು. ಮುಸ್ಲಿಂ, ಕ್ರಿಶ್ಚಿಯನ್, ಹಿಂದೂಗಳನ್ನು ಒಟ್ಟಾಗಿ ಕರೆದೊಯ್ಯುವ ಪಕ್ಷ ಕಾಂಗ್ರೆಸ್ ಎಂದರು.
ಬಿಜೆಪಿಗೆ ಜನತಂತ್ರ ವಿಕೇಂದ್ರೀಕರಣದ ಮೇಲೆ ನಂಬಿಕೆ ಇಲ್ಲ. ಹಿಂದುಳಿದವರು, ಅಲ್ಪಸಂಖ್ಯಾತರು, ದಲಿತರು ಹಾಗೂ ಮಹಿಳೆಯರ ಕೈಗೆ ಅಧಿಕಾರ ಸಿಗುವುದು ಇಷ್ಟವಿಲ್ಲ. ಹಾಗಾಗಿಯೇ ಮೀಸಲಾತಿ ರದ್ದುಪಡಿಸಿ ಎಂದು ಬಿಜೆಪಿ ಮುಖಂಡ ರಾಮಾಜೋಯಿಸ್ ಸುಪ್ರೀಂಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು ಎಂದು ಕುಟುಕಿದರು.
೬ ವರ್ಷಗಳ ಅಧಿಕಾರಾವಧಿಯಲ್ಲಿ ಹೆಸರಿಸಬಹುದಾದ ಯಾವ ಉತ್ತಮ ಕೆಲಸವನ್ನೂ ಬಿಜೆಪಿ ಮಾಡಿಲ್ಲ. ನೋಟು ಅಮಾನ್ಯ, ಜಿಎಸ್‌ಟಿ ಹೆಸರಿನಲ್ಲಿ ಬಡವರಿಗೆ ತೊಂದರೆ ನೀಡಿದ್ದು ಅವರ ಸಾಧನೆ ಎಂದು ವ್ಯಂಗ್ಯವಾಡಿದರು.
ರೈತರ ಆದಾಯ ದುಪ್ಪಟ್ಟಾಗಲಿಲ್ಲ. ಜಿಡಿಪಿ ಪಾತಾಳಕ್ಕೆ ಕುಸಿದಿದೆ. ವಿದೇಶಗಳಿಂದ ಕಪ್ಪುಹಣ ಹೊರತರಲಿಲ್ಲ. ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತ ನೇಪಾಳ, ಪಾಕಿಸ್ತಾನಕ್ಕಿಂತ ಹಿಂದೆ ಬಿದ್ದಿದೆ. ಬಡತನ, ನಿರುದ್ಯೋಗ ಹೆಚ್ಚಾಗುತ್ತಿದೆ. ಕೈಗಾರಿಕೆಗಳು ಮುಚ್ಚುತ್ತಿವೆ. ಮೋದಿ ಅವರಂಥ ಸುಳ್ಳುಗಾರ ಪ್ರಧಾನಿಯನ್ನು ದೇಶದ ಇತಿಹಾಸದಲ್ಲಿ ಕಾಣಲು ಸಾಧ್ಯವಿಲ್ಲ ಎಂದರು.
ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ಬಿಜೆಪಿಯಲ್ಲಿ ಯಾರೂ ಇಲ್ಲ. ಹಾಗಾಗಿ, ಕಾಂಗ್ರೆಸ್ ಅನ್ಯಾಯ ಮಾಡಿದೆ ಎಂದು ಕಾಂಗ್ರೆಸ್‌ನ ಸರ್ದಾರ್ ವಲ್ಲಭಬಾಯ್ ಪಟೇಲರನ್ನು ಹೈಜಾಕ್ ಮಾಡಿದರು. ಅಂಬೇಡ್ಕರ್, ಗಾಂಧೀಜಿ ಅವರನ್ನೂ ನಮ್ಮವರು ಎಂದರು. ಸಂವಿಧಾನ ಬದಲಿಸಲು ಹೊರಟವರಿಗೆ, ಗಾಂಧೀಜಿಯನ್ನು ಕೊಂದ ಗೋಡ್ಸೆಯನ್ನು ಪೂಜಿಸುವವರಿಗೆ ನಿಜವಾಗಿಯೂ ನೈತಿಕತೆ ಇದೆಯಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೆ ತಂದಿದ್ದು ಯುಪಿಎ ಸರ್ಕಾರ. ರಾಜ್ಯದಲ್ಲಿ ಬಡವರಿಗೆ ಉಚಿತವಾಗಿ ಅಕ್ಕಿ ಕೊಟ್ಟಿದ್ದು ಕಾಂಗ್ರೆಸ್ ಸರ್ಕಾರ. ಆದರೂ, ಅನ್ನಭಾಗ್ಯ ಯೋಜನೆಯ ಲಾಭ ಪಡೆಯಲು, ಜನರನ್ನು ದಾರಿ ತಪ್ಪಿಸಲು ಬಿಜೆಪಿ ವ್ಯವಸ್ಥಿತವಾಗಿ ಸುಳ್ಳುಗಳನ್ನು ಹರಡುತ್ತಿದೆ ಎಂದರು.
ಇದೇ ವೇಳೆ ಕಾಂಗ್ರೆಸ್ ಪಕ್ಷದಿಂದ ಅತಿ ಹೆಚ್ಚುಬಾರಿ ಗೆದ್ದು ಬಂದ ಹಿರಿಯ ಮುಖಂಡರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರ್‌ನಾಥ್, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮುಖಂಡರಾದ ವಿನಯಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ವಿಶುನಾಥನ್, ನಾರಾಯಣಸ್ವಾಮಿ, ಗೋಪಾಲ ಪೂಜಾರಿ, ಐವನ್ ಡಿಸೋಜಾ, ಯು.ಆರ್.ಸಭಾಪತಿ, ಜಿ.ಎ.ಭಾವಾ, ಎಂ.ಎ.ಗಫೂರ್, ರಂಗಸ್ವಾಮಿ, ರೋಷನಿ ಒಲಿವೆರಾ ಇದ್ದರು.