ಗೋಪಾಲ ಭಂಡಾರಿಯವರ ಅಕಾಲಿಕ ಮರಣಕ್ಕೆ ಕಂಬನಿ ಮಿಡಿದ ಉಡುಪಿ ಬಿಷಪ್


ಸಜ್ಜನ ರಾಜಕಾರಣಿ, ಜನಪರ ಕಾಳಜಿಯ ನಾಯಕ ಕಾರ್ಕಳದ ಮಾಜಿ ಶಾಸಕ ಎಚ್. ಗೋಪಾಲ ಭಂಡಾರಿಯವರ ಅಕಾಲಿಕ ಮರಣವು ಅವರ ಆಪ್ತರಿಗೆ ಮಾತ್ರವಲ್ಲದೆ, ಅವರೊಡನೆ ಒಡನಾಟವಿದ್ದ ಉಡುಪಿ ಜಿಲ್ಲೆಯ ಎಲ್ಲರಿಗೂ ಅತೀವ ದುಃಖವನ್ನು ತಂದಿದೆ. ದಯಾಮಯಿ ಭಗವಂತ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ. ಈ ಆಘಾತವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ಹಾಗೂ ಆಪ್ತರಿಗೆ ದಯಪಾಲಿಸಲಿ ಎಂದು ಪ್ರಾರ್ಥನೆ. 1999 ಹಾಗೂ 2008 ರಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಅವರು ಸಜ್ಜನ ರಾಜಕಾರಣಿ ಎಂದೇ ಹೆಸರು ಮಾಡಿದವರು. ಜಾತಿ, ಹಣಬಲವಿಲ್ಲದೆ ಕೇವಲ ತಮ್ಮ ವರ್ಚಸ್ಸು, ಸಾಮಾಜಿಕ ಕಳಕಳಿಯಿಂದಲೇ ಜನಪ್ರಿಯರಾದವರು. ಸಾವಿರಾರು ಗೇಣಿದಾರರಿಗೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದರು. ಬೇರೆ ಪಕ್ಷದ ರಾಜಕೀಯ ಎದುರಾಳಿಗಳನ್ನು ಗೌರವದಿಂದ ನಡೆಸಿಕೊಳ್ಳುವ ಮುತ್ಸದ್ದಿತನ ಅವರಲ್ಲಿತ್ತು.
ಅತ್ತೂರು ಸಂತ ಲಾರೆನ್ಸರ ಭಕ್ತರಾಗಿದ್ದ ಅವರು ಪುಣ್ಯಕ್ಷೇತ್ರದ ಬಗ್ಗೆ ಅವರು ಅತೀವ ಕಾಳಜಿಯನ್ನು ವಹಿಸಿದ್ದರು. ಪುಣ್ಯಕ್ಷೇತ್ರದ ಅಭಿವೃದ್ಧಿಯಲ್ಲಿ ಅವರ ದೇಣಿಗೆಯನ್ನು ಕೃತಜ್ಞತಾಭಾವದಿಂದ ಸ್ಮರಿಸತಕ್ಕದ್ದು. ವಾರ್ಷಿಕ ಮಹೋತ್ಸವದ ದಿನಗಳಲ್ಲಿ ಹಲವಾರು ಬಾರಿ ಪುಣ್ಯಕ್ಷೇತ್ರಕ್ಕೆ ಭೇಟಿಯಿತ್ತು, ಮಹೋತ್ಸವವನ್ನು ಸುಸೂತ್ರವಾಗಿ ನಡೆಸಲು ಅನುವು ಮಾಡಿಕೊಡುತ್ತಿದ್ದರು. ಜನಪ್ರಿಯ ನಾಯಕ ದಿವಂಗತ ಗೋಪಾಲ ಭಂಡಾರಿಯವರ ಅಗಲುವಿಕೆಯಿಂದ ಕಾರ್ಕಳ ಪರಿಸರದ ಕ್ರೈಸ್ತ ಜನತೆಯು ತಮ್ಮ ಬಗ್ಗೆ ಪ್ರಾಮಾಣಿಕ ಪ್ರೀತಿ ಮತ್ತು ಕಾಳಜಿಯುಳ್ಳ ನಾಯಕನನ್ನು ಕಳೆದುಕೊಂಡಂತಾಗಿದೆ ಎಂದು ಉಡುಪಿಯ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ| ಜೆರಾಲ್ಡ್ ಐಸಾಕ್ ಲೋಬೊ ರವರು ತಮ್ಮ ಸಂತಾಪ ಸೂಚನೆಯಲ್ಲಿ ತಿಳಿಸಿದ್ದಾರೆ..

Leave a Reply

Your email address will not be published. Required fields are marked *

error: Content is protected !!