ಶ್ರೀಗಳ ಆದರ್ಶ ಪಾಲಿಸವುದೇ ದೊಡ್ಡ ಶೃದ್ಧಾಂಜಲಿ: ಡಾ.ಭಾಸ್ಕರಾನಂದ
ಉಡುಪಿ: ಪೇಜಾವರ ಶ್ರೀಗಳು ಇಂದು ನಮ್ಮ ಕಣ್ಣ ಮುಂದೆ ಇರದಿರಬಹುದು, ಆದರೇ ಅವರು ಆದರ್ಶಗಳು ನಮ್ಮೊಂದಿಗಿವೆ, ಅವುಗಳನ್ನು ಜೀವನದಲ್ಲಿ ಅಳವಡಿಸಿ ಪಾಲಿಸುವುದೇ ನಾವು ಅವರಿಗೆ ನೀಡಬಹುದಾದ ಬಹಳ ದೊಡ್ಡ ಶೃದ್ಧಾಂಜಲಿ ಎಂದು ಹಿರಿಯ ವೈದ್ಯ, ಉಡುಪಿ ತುಳುಕೂಟದ ಸ್ಥಾಪಕಾಧ್ಯಕ್ಷ ಡಾ.ಭಾಸ್ಕರಾನಂದ ಕುಮಾರ್ ಹೇಳಿದ್ದಾರೆ.
ಅವರು ಭಾನುವಾರ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ತುಳುಕೂಟದಿಂದ ನಡೆದ ಶೃದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.
ಪೇಜಾವರ ಶ್ರೀಗಳು, ಬಹುಶಃ ದಲಿತರಿಗೂ ದೇವರಿಗೆ ಭಕ್ತಿ ತೋರಿಸುವ ಅಧಿಕಾರ ಇದೆ ಎಂದು ತೋರಿಸಿದ ಪ್ರಥಮ ಮಠಾಧಿಪತಿಗಳಾಗಿದ್ದಾರೆ. ಅವರಿಗೆ ಮಠದ ಅನೇಕ ಕಟ್ಟುಪಾಡುಗಳಿದ್ದವು. ಆದರೂ ಅವರು ದಲಿತರ ಕಲ್ಯಾಣಕ್ಕೆ ಶ್ರಮಿಸಿ ಜಯಿಸಿದವರು ಎಂದ ಅವರು, ತಾನು ವೈದ್ಯನಾಗಿದ್ದಾಗ, ಪೇಜಾವರ ಶ್ರೀಗಳು ಯಾವ ಜಾತಿ ಧರ್ಮದವರೇ ಇರಲಿ ಅವರಿಗೆ ಸಮಾನತೆಯಿಂದ ಚಿಕಿತ್ಸೆ ನೀಡಿಎಂದು ಹೇಳಿದ್ದರು ಎಂದು ನೆನಪಿಸಿಕೊಂಡರು.
ತುಳುಕೂಟದ ಸಲಹೆಗಾರರಾದ ಮುರಳಿಧರ ಉಪಾಧ್ಯಾಯ ಹಿರಿಯಡ್ಕ ಅವರು, ಗಾಂಧಿವಾದಿಗಳಾಗಿದ್ದ ಪೇಜಾವರ ಶ್ರೀಗಳು, ರಾತ್ರಿ ಹಗಲಾಗುವುದರೊಳಗೆ ಸಮಾಜವನ್ನು ತಿದ್ದುವುದು ಸಾಧ್ಯವಿಲ್ಲ, ಅದರೇ ಸಣ್ಣಸಣ್ಣ ಪ್ರಯತ್ನಗಳನ್ನು ಮಾಡುವುದನ್ನು ನಿಲ್ಲಿಸುವುದಿಲ್ಲ ಎಂದಿದ್ದರು ಎಂದು ಹೇಳಿದರು.
ತುಳುಕೂಟದ ಅಧ್ಯಕ್ಷ ವಿ.ಜಿ.ಶೆಟ್ಟಿ ಅವರು, ಪೇಜಾವರ ಶ್ರೀಗಳು ಸಾಂಸ್ಕೃತಿಕ ಮತ್ತು ಸಾಮಾಜಿಕ ಸೌಹಾರ್ದದ ರಾಯಬಾರಿಯಾಗಿದ್ದರು, ನಿಜವಾದ ಅರ್ಥದಲ್ಲಿ ವಿಶ್ವಮಾನವರಾಗಿದ್ದರು ಎಂದು ಗುಣಗಾನ ಮಾಡಿದರು.
ವೇದಿಕೆಯಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯೆ ತಾರಾ ಉಮೇಶ್ ಆಚಾರ್ಯ, ತುಳುಕೂಟದ ಪ್ರಧಾನ ಕಾರ್ಯದರ್ಶಿ ಗಂಗಾಧರ ಕಿದಿಯೂರು, ಕೋಶಾಧಿಕಾರಿ ಎಂ.ಜಿ.ಚೈತನ್ನ ಮತ್ತು ಪದಾಧಿಕಾರಿಗಳಾದ ಪ್ರಭಾಕರ ಭಂಡಾರಿ, ಯು.ಜಿ.ದೇವಾಡಿಗ, ವಿದ್ಯಾ ರಮೇಶ್, ವೇದಾವತಿ ಶೆಟ್ಟಿ, ಯಶೋಧಾ ಕೇಶವ್ ಹಾಗೂ ಸರೋಜಾ ಯಶವಂತ್ ಉಪಸ್ಥಿತರಿದ್ದರು. ಯಾಧವ ಕರ್ಕೇರ ಕಾರ್ಯಕ್ರಮ ನಿರೂಪಿಸಿದರು.