ಅಯೋಧ್ಯೆ ತೀರ್ಪು ಶನಿವಾರ ಬೆಳಗ್ಗೆ 10:30ಕ್ಕೆ ಪ್ರಕಟ
ನವದೆಹಲಿ: ಇಡೀ ದೇಶವೇ ಕಾಯುತ್ತಿರುವ ಅಯೋಧ್ಯೆ ತೀರ್ಪು ಶನಿವಾರ ಬೆಳಗ್ಗೆ 10:30ಕ್ಕೆ ಪ್ರಕಟವಾಗಲಿದೆ. ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯ್ ನ.17 ರಂದು ನಿವೃತ್ತಿ ಆಗಲಿರುವ ಹಿನ್ನೆಲೆಯಲ್ಲಿ ತೀರ್ಪು ಈ ವಾರ ಅಥವಾ ಮುಂದಿನ ವಾರ ಪ್ರಕಟವಾಗಲಿದೆ ಎನ್ನುವ ನಿರೀಕ್ಷೆ ಇತ್ತು. ಆಗಸ್ಟ್ 6 ರಿಂದ ಸುಪ್ರೀಂ ಕೋಟ್ ದಿನನಿತ್ಯ ವಿಚಾರಣೆಯನ್ನು ಆರಂಭ ಮಾಡಿತ್ತು. 40 ದಿನಗಳ ಕಾಲ ನಿರಂತರ ವಿಚಾರಣೆ ನಡೆಸಿದ ಸಂವಿಧಾನ ಪೀಠ ಅಕ್ಟೋಬರ್16ಕ್ಕೆ ವಿಚಾರಣೆ ಪೂರ್ಣಗೊಳಿಸಿ ಆದೇಶ ಕಾಯ್ದಿರಿಸಿತ್ತು. ಸುಪ್ರೀಂ ಕೋರ್ಟ್ ಅಯೋಧ್ಯೆ ವಿವಾದವನ್ನು ಪರಿಹಾರಿಸಿಕೊಳ್ಳಲು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಫ್‍ಎಂಐ ಕಲಿಫುಲ್ಲಾ, ಧರ್ಮಗುರು ಹಾಗೂ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ರವಿಶಂಕರ್ ಗುರೂಜಿ ಹಾಗೂ ಹಿರಿಯ ವಕೀಲ ಶ್ರೀರಾಮ್ ಮಂಚು ಅವರನ್ನು ಒಳಗೊಂಡ ತ್ರಿಸದಸ್ಯ ಸಮಿತಿಯನ್ನು ರಚಿಸಿತ್ತು. ಆದರೆ ಈ ವಿವಾದವನ್ನು ಬಗೆಹರಿಸಲು ಸಮಿತಿ ವಿಫಲವಾದ ಹಿನ್ನೆಲೆಯಲ್ಲಿ ಸಂವಿಧಾನ ಪೀಠ ದಿನನಿತ್ಯ ವಿಚಾರಣೆ ನಡೆಸಿತ್ತು. 2010 ರಲ್ಲಿ ಅಲಹಾಬಾದ್ ನ್ಯಾಯಾಲಯ ಅಯೋಧ್ಯೆ ಕುರಿತು ತೀರ್ಪು ನೀಡಿತ್ತು. ಈ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ 14 ಮೇಲ್ಮನವಿ ಅರ್ಜಿಗಳು ಸಲ್ಲಿಕೆ ಮಾಡಲಾಗಿತ್ತು. ಈ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಸಂಧಾನ ಮೂಲಕವೇ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಸೂಚನೆ ನೀಡಿತ್ತು. ಆದರೆ ಈ ಸಂದರ್ಭದಲ್ಲೇ ಹಿಂದೂ ಧರ್ಮದ ಸಂಘಟನೆಗಳು 1950 ರಿಂದಲೂ ತೀರ್ಪಿಗಾಗಿ ಕಾಯುತ್ತಿದ್ದು, ಸಂಧಾನದಿಂದ ಇದರ ಪರಿಹಾರ ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದರು. ಇತ್ತ 2.7 ಎಕರೆ ಮಾತ್ರ ವಿವಾದಿತ ಪ್ರದೇಶ ಆಗಿರುವುದರಿಂದ ಮಧ್ಯಸ್ಥಿಕೆವೊಂದೇ ಪರಿಹಾರ ಮಾರ್ಗ ಎಂದು ವಕ್ಫ್ ಮಂಡಳಿ ಹೇಳಿತ್ತು. ಸಂಧಾನ ವಿಫಲವಾದ ಹಿನ್ನೆಲೆಯಲ್ಲಿ ಕೋರ್ಟ್ ಪ್ರತಿನಿತ್ಯ ವಿಚಾರಣೆ ನಡೆಸಿತ್ತು. |