ಬಿಜೆಪಿಗೆ ಪರ್ಯಾಯ ಪದವೇ ಸುಳ್ಳು ಹೇಳೋದು: ಸಿದ್ದರಾಮಯ್ಯ

ಬಾಗಲಕೋಟೆ: ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸ್ಥಾನ ಕೇಳಿಯೇ ಇರಲಿಲ್ಲ, ನಮ್ಮ ಶಾಸಕರು ಬೇಕು ಎಂದು ಒತ್ತಾಯ ಮಾಡಿದರು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸಚಿವ ಸಿ.ಟಿ. ರವಿ ಅವರ ಹೇಳಿಗೆ ಸ್ಪಷ್ಟನೆ ನೀಡಿದರು. 

ಬಾದಾಮಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ಸಿ.ಟಿ. ರವಿಗೆ ಉತ್ತರ ಕೊಡಬಾರದು. ಅವರು ಸುಳ್ಳು ಹೇಳುತ್ತಾರೆ ಎಂದು ತಿರುಗೇಟು ನೀಡಿ, ನಿತ್ಯ ಸುಳ್ಳು ಹೇಳೋದೆ ಅವರ ಕೆಲಸ, ಬಿಜೆಪಿ ಪರ್ಯಾಯ ಪದವೇ ಸುಳ್ಳು ಹೇಳೋದು ಎಂದು ಸಚಿವ ರವಿ ವಿರುದ್ಧ ವಾಗ್ದಾಳಿ ನಡೆಸಿದರು.

ನೆರೆ ನಿರ್ವಹಣೆಯಲ್ಲಿ ವಿಫಲ:
ರಾಜ್ಯ ಸರ್ಕಾರ ಸಮರ್ಪಕ ನೆರೆ ನಿರ್ವಹಣೆಯಲ್ಲಿ ವಿಫಲವಾಗಿದೆ. ನೆರೆಗೆ ಸರ್ಕಾರದ ಬಳಿ ದುಡ್ಡು ಇಲ್ಲವಾಗಿದೆ. ಕೇಂದ್ರದ ಪರಿಹಾರ ನಿರೀಕ್ಷೆಗೆ ಧೂಪ(ಲೋಬಾಣ) ಹಾಕಿದಂತಾಗಿದೆ. ಕೇಂದ್ರ ಸರ್ಕಾರ ಕೊಟ್ಟಿರೋ ಪರಿಹಾರ ಅತ್ಯಲ್ಪವೆಂದ ಸಿದ್ದರಾಮಯ್ಯ, ರಾಜ್ಯ ಸರ್ಕಾರ ಕೇಳಿರೋದು 38 ಸಾವಿರ ಕೋಟಿಯಾದರೂ ಕೇಂದ್ರ ಕೊಟ್ಟಿದ್ದು 1200 ಕೋಟಿ. ಕನಿಷ್ಠ ಕೇಂದ್ರ ಸರ್ಕಾರ ಅರ್ಧದಷ್ಟು ಪರಿಹಾರ ಕೊಡಬೇಕಿತ್ತು ಎಂದರು.

ನೆರೆಯಿಂದ ರಾಜ್ಯದಲ್ಲಿ 1 ಲಕ್ಷ ಕೋಟಿ ಹಾನಿಯಾಗಿದೆ. ಬಹುತೇಕ ಕಡೆ ಇಡೀ ಗ್ರಾಮ ಸ್ಥಳಾಂತರಿಸಬೇಕು ಎನ್ನುವ ಬೇಡಿಕೆಯಿದೆ. ಅಧಿವೇಶನದಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದೆ. ಆದರೆ ಇಲ್ಲಿಯವರೆಗೂ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಅವರು ಹೇಳಿದರು.

ಟಿಪ್ಪು ಹೋರಾಟ ಸುಳ್ಳಾ?:
ಪಠ್ಯದಿಂದ ಟಿಪ್ಪು ವಿಷಯದಿಂದ ತೆಗೆಯುತ್ತಿರುವ ವಿಚಾರ ಕುರಿತು ಮಾತನಾಡಿದ ಸಿದ್ದರಾಮಯ್ಯ ಪಠ್ಯದಿಂದ ಟಿಪ್ಪು ವಿಷಯ ಕೈ ಬಿಡುವುದರಿಂದ ಚರಿತ್ರೆ ಬದಲಾವಣೆ ಮಾಡಲು ಸಾಧ್ಯವೇ, ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಡಿದ್ದು ಸುಳ್ಳಾ ಇದೊಂದು ಮುರ್ಖತನದ ಚಿಂತನೆಯಾಗಿದ್ದು, ಈ ಚಿಂತನೆಯನ್ನು ಬಿಟ್ಟುಬಿಡಿ. ಇತಿಹಾಸದಲ್ಲಿ ಏನಿದೆ ಅದು ಇರಬೇಕು. ಜನರಿಗೆ ಇತಿಹಾಸ ಗೊತ್ತಾಗಬೇಕು. ಇತಿಹಾಸವನ್ನು ತಿರುಚಿದರೆ ಹೇಗೆ ಎಂದು ಅವರು ಪ್ರಶ್ನಿಸಿದ ಅವರು ಇತಿಹಾಸವನ್ನ ಯಾರು ಬದಲಾಯಿಸಬಾರದು. ಇತಿಹಾಸ ಗೊತ್ತಿರದೇ ಇರೋರು ಯಾರೂ ಭವಿಷ್ಯ ರೂಪಿಸಲಾರರು. ಯಾರೋಬ್ಬರ ಮೇಲೆ ದ್ವೇಷಕ್ಕೆ ಇತಿಹಾಸ ತಿರುಚಬಾರದು. ಟಿಪ್ಪು, ಮೈಸೂರು ಮಹಾರಾಜರು, ಅಕ್ಬರ್, ಅಶೋಕ್ ಬಗ್ಗೆ ಓದದಿದ್ದರೆ ಹೇಗೆ?. ಟಿಪ್ಪುವಿನ ಬಗ್ಗೆ ವಿದ್ಯಾರ್ಥಿಗಳು ಅವರದೇ ಆದ ಅನುಭವ ರೂಪಿಸಿಕೊಳ್ಳಬೇಕು ಎಂದು ಹೇಳಿದರು.

ಈ ಹಿಂದೆ ಬಿಎಸ್‍ವೈ, ಜಗದೀಶ್ ಶೆಟ್ಟರ್ ಅವರು ಟಿಪ್ಪು ಜಯಂತಿ ವೇಳೆ ಖಡ್ಗ ಹಿಡಿದು ಪೇಟಾ ಹಾಕಿಕೊಂಡು, ಟಿಪ್ಪು ಜಯಂತಿ ಆಚರಣೆ ಮಾಡಿದರು. ಟಿಪ್ಪು ದೇಶಪ್ರೇಮಿ ಎಂದು ಜಗದೀಶ್ ಶೆಟ್ಟರ್ ಭಾಷಣ ಮಾಡಿರೋದನ್ನು ತೋರಿಸಲಾ ಎಂದು ಸವಾಲು ಹಾಕಿದ ಅವರು ಅಧಿಕಾರ ಇದ್ದಾಗ ಒಂದು ರೀತಿ ಒಲೈಸೋದು, ಇಲ್ಲದೇ ಇದ್ದಾಗ ಇನ್ನೊಂದು ಮಾಡೋದು. ರಾಜಕಾರಣದಲ್ಲಿ ಇಂಥಹ ಢೋಂಗಿತನ ಬಿಡಬೇಕು. ಯಾವಾಗಲೂ ನನ್ನದು ಒಂದೇ ನೀತಿ ಇರುತ್ತದೆ. ಅಶೋಕ್ ಮೇಲೆ ಹೇಗಿದೆಯೋ, ಟಿಪ್ಪುವಿನ ಮೇಲೆ ಯಾವಾಗಲೂ ಒಂದು ಅಭಿಪ್ರಾಯ ಇರುತ್ತದೆ. ಸಿಎಂ ಆಗಿದ್ದಾಗಲೂ, ಸಿಎಂ ಇಲ್ಲದಾಗಲೂ ಒಂದೇ ಅಭಿಪ್ರಾಯ ಇದೆ ಎಂದು ಅವರು ತಿಳಿಸಿದರು

Leave a Reply

Your email address will not be published. Required fields are marked *

error: Content is protected !!