ಹೆದ್ದಾರಿ ಬಿರುಕಿಗೆ ತಾತ್ಕಾಲಿಕ ತೇಪೆ : ಜಿಲ್ಲಾಡಳಿತದಿಂದ ಮುಂಜಾಗೃತಾ ಕ್ರಮ
ಮಡಿಕೇರಿ: ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಕಾಟಕೇರಿ ಬಳಿ ಕಾಣಿಸಿಕೊಂಡಿರುವ ರಸ್ತೆ ಬಿರುಕನ್ನು ಕಾಂಕ್ರಿಟ್ನಿಂದ ಮುಚ್ಚುವ ಮೂಲಕ ಮಳೆನೀರು ಒಳಹರಿದು ಸಂಭವಿಸಬಹುದಾದ ಹೆಚ್ಚಿನ ಅನಾಹುತವನ್ನು ತಪ್ಪಿಸುವ ಪ್ರಯತ್ನ ಮಾಡಲಾಗಿದೆ. ರಸ್ತೆಯ ಮೇಲೆ ನೀರು ಹರಿಯದಂತೆ ಸ್ಯಾಂಡ್ ಬಂಡ್ಗಳನ್ನು ಅಳವಡಿಸಿ ರಸ್ತೆ ಕುಸಿಯದಂತೆ ಕ್ರಮಕೈಗೊಳ್ಳಲಾಗಿದೆ. ಭಾರೀ ವಾಹನಗಳ ಸಂಚಾರದ ಮಾರ್ಗವನ್ನು ಈಗಾಗಲೇ ಬದಲಾಯಿಸಲಾಗಿದ್ದು, ರಸ್ತೆಯ ಅರ್ಧಭಾಗದ ಮೂಲಕ ಇತರ ವಾಹನಗಳು ಸಂಚರಿಸುತ್ತಿವೆ. ಮುಂಜಾಗೃತಾ ಕ್ರಮವಾಗಿ ಬ್ಯಾರಿಕೇಡ್ಗಳನ್ನು ಅಳವಡಿಸಿ ಪೊಲೀಸರು ನಿಗಾ ವಹಿಸಿದ್ದಾರೆ. ಹೆದ್ದಾರಿಯ ಎರಡೂ ಬದಿಗಳಲ್ಲಿ ಜೆ.ಸಿ.ಬಿ ಬಳಸಿ, ಚರಂಡಿಗಳನ್ನು ತೆಗೆಯಲಾಗುತ್ತಿದೆ.
ಸ್ಥಳಕ್ಕೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಭೇಟಿ ನೀಡಿ ರಾಷ್ಟ್ರೀಯ ಹೆದ್ದಾರಿ ನಿರ್ವಹಣಾ ಘಟಕದ ಅಭಿಯಂತರರೊಂದಿಗೆ ಸಮಾಲೋಚಿಸಿದರು. ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದರು.
ಶಾಸಕ ಕೆ.ಜಿ.ಬೋಪಯ್ಯ ಹಾಗೂ ಎಂ.ಪಿ.ಅಪ್ಪಚ್ಚು ರಂಜನ್ ಅವರುಗಳು ಹೆದ್ದಾರಿ ಬಿರುಕು ಬಿಟ್ಟ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ರಸ್ತೆಯ ಮೇಲೆ ನೀರು ಹರಿದ ಹಿನ್ನೆಲೆಯಲ್ಲಿ ಬಿರುಕು ಮೂಡಿದ್ದು, ಚರಂಡಿ ವ್ಯವಸ್ಥೆಗೆ ಕ್ರಮ ಕೈಗೊಳ್ಳುವಂತೆ ಇಂಜಿನಿಯರ್ ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಿದರು. ರಸ್ತೆ ದುರಸ್ತಿ ಸಂದರ್ಭ ಅಳವಡಿಸಿಕೊಳ್ಳಲಾದ ತಂತ್ರಜ್ಞಾನದ ಬಗ್ಗೆ ಶಾಸಕರು ಮಾಹಿತಿ ಪಡೆದರು. ಕುಸಿದಿರುವ ಸ್ಥಳದಲ್ಲಿ ಕಾಂಕ್ರೀಟ್ ತಡೆಗೋಡೆ ಮತ್ತು ಕಾಂಕ್ರೀಟ್ ಒಳಚರಂಡಿ ವ್ಯವಸ್ಥೆ ಮಾಡಬೇಕೆಂದರು. ಯಾವುದೇ ಕಾರಣಕ್ಕೂ ವಾಹನಗಳ ಸಂಚಾರಕ್ಕೆ ತಡೆಯಾಗದಂತೆ ನೋಡಿಕೊಳ್ಳಬೇಕೆಂದು ಶಾಸಕರು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗೆ ಸೂಚಸಿದರು.
ಬಳಿಕ ಸುದ್ದಿಗರರೊಂದಿಗೆ ಮಾತನಾಡಿದ ಶಾಸಕ ಕೆ.ಜಿ.ಬೋಪಯ್ಯ, ಕಳೆದ ಬಾರಿ ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ ಮಳೆ ಸುರಿದು ಮೈಸೂರು ಬಂಟ್ವಾಳ ರಾಷ್ಟ್ರೀಯ ಹೆದ್ದಾರಿಗೆ ಹಾನಿಯಾಗಿತ್ತು. ಬಳಿಕ ಹೆದ್ದಾರಿ ಪ್ರಾಧಿಕಾರದಿಂದ ರಸ್ತೆಗಳನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡಲಾಗಿದೆ. ಆದರೆ ಶಾಶ್ವತ ಯೋಜನೆ ರೂಪಿಸಲು ಹೆಚ್ಚುವರಿ 45 ಕೋಟಿ ರೂ.ಗಳ ಅನುದಾನ ಅಗತ್ಯವಿದ್ದು, ಚುನಾವಣಾ ನೀತಿ ಸಂಹಿತೆ ಮತ್ತಿತ್ತರ ಕಾರಣಗಳಿಂದ ಈ ಹಣ ಬಿಡುಗಡೆಯಾಗಲು ವಿಳಂಬವಾಗಿದೆ. ಈ ಕುರಿತು ಸಂಸದ ಪ್ರತಾಪ್ ಸಿಂಹ ಅವರ ಗಮನ ಸೆಳೆದಿದ್ದು, ಪ್ರಸ್ತುತ ಈ ಮನವಿ ಕೇಂದ್ರ ಸರಕಾರದ ಬಳಿ ಇದೆ. ಈ ಅನುದಾನ ಬಿಡುಗಡೆಯಾದ ಬಳಿಕ ಶಾಶ್ವತ ಕಾಮಗಾರಿಗಳು ಆರಂಭವಾಗುತ್ತದೆ ಎಂದು ತಿಳಿಸಿದರು.
ಕಳೆದ ಬಾರಿ ಮರಳಿನ ತಡೆಗೋಡೆ ನಿರ್ಮಿಸುವ ಸಂದರ್ಭ ನಾನು ಆಕ್ಷೇಪ ವ್ಯಕ್ತಪಡಿಸಿ ಕೊಡಗಿನ ವಾತಾವರಣಕ್ಕೆ ಇದು ಸೂಕ್ತವಲ್ಲವೆಂದು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದ್ದೆ. ಆದರೆ ಅಧಿಕಾರಿಗಳು ತಮ್ಮದೇ ಆದ ಕಾರಣಗಳನ್ನು ನೀಡಿ ಮರಳಿನ ಮೂಟೆಗಳನ್ನು ಇಟ್ಟರು. ಇದೀಗ ಮತ್ತೆ ರಸ್ತೆ ಬಿರುಕು ಕಾಣಿಸಿಕೊಂಡಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಜಿ.ಪಂ ಅಧ್ಯಕ್ಷ ಬಿ.ಎ.ಹರೀಶ್, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ಕಾಟಕೇರಿ ಗ್ರಾಮಸ್ಥರು ಹಾಜರಿದ್ದರು.