ತೆಲಂಗಾಣ ಮುಷ್ಕರ: ಸಾರಿಗೆ ಸಂಸ್ಥೆಯ 48000 ಸಿಬ್ಬಂದಿ ವಜಾ
ಹೈದರಾಬಾದ್: ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅನಿರ್ದಿಷ್ಟಾವಧಿಯ ಮುಷ್ಕರ ನಡೆಸುತ್ತಿದ್ದ ತೆಲಂಗಾಣ ಸಾರಿಗೆ ಸಂಸ್ಥೆಯ 48000 ಸಿಬ್ಬಂದಿಯನ್ನು ಕೆ. ಚಂದ್ರಶೇಖರ್ ರಾವ್ ಸರ್ಕಾರ ಸೋಮವಾರ ವಜಾಗೊಳಿಸಿದೆ. ಸರ್ಕಾರದಿಂದ ಈ ನಿರ್ಧಾರ ಹೊರಬೀಳುತ್ತಲೇ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಪ್ರತಿಭಟನೆಗಳು ಆರಂಭವಾಗಿವೆ.
ಕೆಲಸಕ್ಕೆ ಹಾಜರಾಗುವಂತೆ ನೀಡಿದ್ದ ಸೂಚನೆಯನ್ನು ನೌಕರರು ದಿಕ್ಕರಿಸಿದ ಹಿನ್ನೆಲೆಯಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಅವರು ಭಾನುವಾರ ರಾತ್ರಿ ಸಾರಿಗೆ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ್ದರು. ಸೋಮವಾರ ಬೆಳಗ್ಗೆ ನೌಕರರನ್ನು ವಜಾಗೊಳಿಸಿರುವ ನಿರ್ಧಾರವನ್ನು ಪ್ರಕಟಿಸಿದರು.
ಸರ್ಕಾರದ ನಿರ್ಧಾರದ ಹಿನ್ನೆಲೆಯಲ್ಲಿ ಸಾರಿಗೆ ನೌಕರರು ರಾಜ್ಯಾದ್ಯಂತ ಹೋರಾಟ ಹಮ್ಮಿಕೊಂಡಿದ್ದಾರೆ. ಅಲ್ಲದೆ, ಇದರ ವಿರುದ್ಧ ನ್ಯಾಯಾಲಯದ ಮೊರೆ ಹೋಗಲು ಕಾರ್ಮಿಕ ಸಂಘಟನೆಗಳು ನಿರ್ಧರಿಸಿವೆ.
ತೆಲಂಗಾಣ ಸಾರಿಗೆ ಸಂಸ್ಥೆಯನ್ನು (ಟಿಎಸ್‌ಆರ್‌ಟಿಸಿ) ಸರ್ಕಾರದೊಂದಿಗೆ ವಿಲೀನ ಗೊಳಿಸಬೇಕು, ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು ಎಂಬುದೂ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಕಾರ್ಮಿಕ ಸಂಘಟನೆ ‘ಜಂಟಿ ಕಾರ್ಯಾಚರಣ ಸಮಿತಿ‘ಯು ಶುಕ್ರವಾರ ರಾತ್ರಿ ಅನಿರ್ದಿಷ್ಟಾವತಿ ಹೋರಾಟಕ್ಕೆ ಕರೆ ನೀಡಿತ್ತು. ಈ ಪ್ರತಿಭಟನೆಯಲ್ಲಿ 50 ಸಾವಿರ ನೌಕರರು ಭಾಗವಹಿಸಿದ್ದರು. ಹಬ್ಬದ ಸಂದರ್ಭದಲ್ಲಿ ಸಾರಿಗೆ ನೌಕರರು ಆರಂಭಿಸಿದ ಈ ಹೋರಾಟದಿಂದಾಗಿ ತೆಲಂಗಾಣದಲ್ಲಿ ಸಾರಿಗೆ ಸಮಸ್ಯೆ ಉಂಟಾಗಿದೆ. ಹೋರಾಟಗಾರರು ಶನಿವಾರ ಸಂಜೆ 6ರ ಒಳಗೆ ಕರ್ತವ್ಯಕ್ಕೆ ಹಾಜರಾಬೇಕು ಎಂದು ಸರ್ಕಾರ ಸೂಚಿಸಿತ್ತು. ಆದರೆ, ನೌಕರರು ಹಾಜರಾಗಿರಲಿಲ್ಲ. ಹೀಗಾಗಿ, 48000 ಸಾವಿರ ನೌಕರರನ್ನು ವಜಾಗೊಳಿಸಿರುವ ಸರ್ಕಾರ, ಪ್ರತಿಭಟನಾಕಾರರೊಂದಿಗೆ ಯಾವುದೇ ಮಾತುಕತೆಗಳಿಲ್ಲ ಎಂದೂ ಸ್ಪಷ್ಟಪಡಿಸಿದೆ.