ಸಂತಾನೋತ್ಪತ್ತಿ ಕುರಿತ ಪಾಠ ಹೇಳಿ ಜೈಲುಪಾಲಾದ ಶಿಕ್ಷಕ
ಮಂಗಳೂರು: ಎಸ್ಎಸ್‌ಎಲ್‌ಸಿ ಅನುತ್ತೀರ್ಣಳಾಗಿದ್ದ ವಿದ್ಯಾರ್ಥಿನಿ ಮರು ಪರೀಕ್ಷೆ ಬರೆಯಲು ಶುಲ್ಕ ಪಾವತಿಗೆ ಬಂದಿದ್ದ ವೇಳೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪುತ್ತೂರು ತಾಲ್ಲೂಕಿನ ಸರ್ಕಾರಿ ಪ್ರೌಢ ಶಾಲೆಯೊಂದರ ಪ್ರಭಾರ ಮುಖ್ಯ ಶಿಕ್ಷಕನನ್ನು ಬುಧವಾರ ಬಂಧಿಸಲಾಗಿದೆ.
‘ವಿದ್ಯಾರ್ಥಿನಿಯು ಮರು ಪರೀಕ್ಷೆ ಬರೆಯುವ ಉದ್ದೇಶದಿಂದ ಅ. 11 ರಂದು ಪರೀಕ್ಷಾ ಶುಲ್ಕ ಪಾವತಿಸಲು ಬಂದಿದ್ದಳು. ಆಗ ಆರೋಪಿ ಶಿಕ್ಷಕ ಜೀವ ವಿಜ್ಞಾನ ವಿಷಯದಲ್ಲಿ ಸಂತಾನೋತ್ಪತ್ತಿ ಕುರಿತ ಪಾಠ ಮಾಡುವುದಾಗಿ ಹೇಳಿ ಆಕೆಯೊಂದಿಗೆ ಲೈಂಗಿಕ ಉದ್ದೇಶದಲ್ಲಿ ಮಾತನಾಡಿದ್ದಾನೆ. ಅನುಚಿತವಾಗಿ ವರ್ತಿಸಿದ್ದಾನೆ. ಈ ಕುರಿತು ಬಾಲಕಿ ನೀಡಿದ ದೂರನ್ನು ಆಧರಿಸಿ ಪ್ರಕರಣ ದಾಖಲಿಸಿ, ಆತನನ್ನು ಬಂಧಿಸಲಾಗಿದೆ’ ಎಂದು ಪುತ್ತೂರು ಉಪ ವಿಭಾಗದ ಡಿವೈಎಸ್‌ಪಿ ದಿನಕರ ಶೆಟ್ಟಿ ತಿಳಿಸಿದರು.
ಸಂತ್ರಸ್ತೆಯು ಮೇ ತಿಂಗಳಿನಲ್ಲಿ ಮರು ಪರೀಕ್ಷೆ ಅರ್ಜಿ ಸಲ್ಲಿಕೆ ಸಂಬಂಧ ಶಾಲೆಗೆ ಬಂದಿದ್ದಳು. ಆಗಲೂ ಆಕೆಯೊಂದಿಗೆ ಇದೇ ರೀತಿ ಕಿರುಕುಳ ನೀಡಿದ್ದ. ಸೋಮವಾರ ಮತ್ತೊಮ್ಮೆ ದೌರ್ಜನ್ಯ ನಡೆಸಿದ್ದಾನೆ. ಈ ಕುರಿತು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾಳೆ ಎಂದರು