ತಸ್ಲೀಮ್ ಹತ್ಯಾ ಪ್ರಕರಣ: ಗುಲ್ಬರ್ಗಾ ಪೊಲೀಸರಿಂದಲೇ ತನಿಖೆ
ಬಂಟ್ವಾಳ, : ಇಲ್ಲಿನ ಸಜೀಪಮೂಡ ಗ್ರಾಮದ ನಗ್ರಿ ಶಾಂತಿನಗರದಲ್ಲಿ ಕಾರಿನೊಳಗೆ ಕೊಲೆಗೀಡಾಗಿ ರಕ್ತಸಿಕ್ತವಾಗಿ ತಸ್ಲೀಮ್ ಯಾನೆ ಮುತಾಸಿಮ್‌ನ ಮೃತದೇಹವು ಪತ್ತೆಯಾದ, ಪ್ರಕರಣದ ತನಿಖಾ ಕಾರ್ಯವನ್ನು ಗುಲ್ಬಾರ್ಗಾ ಪೊಲೀಸರೇ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ತಸ್ಲೀಮ್ ಗುಲ್ಬರ್ಗಾ ಜಿಲ್ಲೆಯಲ್ಲಿ ಜೈಲಿನಿಂದ ಜಾಮೀನು ಮೇಲೆ ಬಿಡುಗಡೆಯಾಗುತ್ತಿದ್ದಂತೆ ಆತನನ್ನು ಎರಡು ಕಾರಿನಲ್ಲಿ ಬಂದಿದ್ದ ವಿರೋಧಿ ಗ್ಯಾಂಗ್ ಅಪಹರಣ ನಡೆಸಿತ್ತು. ಇದಕ್ಕೆ ಸಂಬಸಿ ಜ. 31 ರಂದು ಜೇವರ್ಗಿ ಪೊಲೀಸ್ ಸರ್ಕಲ್ ವ್ಯಾಪ್ತಿಯ ನೇಲೊಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜತೆಗೆ ಇದೇ ವಿಚಾರದಲ್ಲಿ ಅಲ್ಲಿನ ಪೊಲೀಸರು ಕೆಲವರನ್ನು ವಶಕ್ಕೆ ಕೂಡ ಪಡೆದಿತ್ತು.
ಅಪಹರಣ ನಡೆಸಿದ ತಂಡವನ್ನು ಅಲ್ಲಿನ ತನಿಖಾಧಿಕಾರಿ ಬೆನ್ನಟ್ಟಿ ಬರುತ್ತಿದ್ದು, ಹೀಗಾಗಿ ತಸ್ಲಿಂ ನ ಕೊಲೆ ಪ್ರಕರಣವನ್ನೂ ಅವರೇ ತನಿಖೆ ನಡೆಸಲಿದ್ದಾರೆ. ಹಂತಕರು ತಸ್ಲಿಂನ ಕುತ್ತಿಗೆ ಬಿಗಿಹಿಡಿದು ಚೂರಿಯಿಂದ ತಿವಿದು ಕೊಲೆಗೈದ ಬಳಿಕ ನಗ್ರಿ ಶಾಂತಿನಗರದಲ್ಲಿ ಕಾರನ್ನು ಬಿಟ್ಟು ಪರಾರಿಯಾಗಿರುವುದರಿಂದ ಗುಲ್ಬಾರ್ಗಾ ಪೊಲೀಸರಿಗೆ ಸಹಕಾರ ನೀಡುವ ಕಾರ್ಯವನ್ನು ಬಂಟ್ವಾಳ ಪೊಲೀಸರು ನಡೆಸಲಿದ್ದಾರೆ ಎಂದು ಬಂಟ್ವಾಳ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಟಿ.ಡಿ.ನಾಗರಾಜ್ ತಿಳಿಸಿದ್ದಾರೆ.