ರವಿವಾರ ಹಗಲು ಕಫ್ಯೂ೯ ಸಡಿಲಿಕೆ: ಬಿ.ಎಸ್. ಯಡಿಯೂರಪ್ಪ

ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಗುರುವಾರ ನಡೆದ ಪ್ರತಿಭಟನೆಯ ಹಿನ್ನೆಲೆಯಲ್ಲಿ ನಡೆದ ಹಿಂಸಾಚಾರದಿಂದಾಗಿ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ವಿಧಿಸಲಾಗಿದ್ದ ಕರ್ಫ್ಯೂವನ್ನು ರವಿವಾರ ಹಗಲು ಹೊತ್ತು ಸಡಿಲಿಕೆ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಗುರುವಾರ ನಡೆದ ಹಿಂಸಾಚಾರದಲ್ಲಿ ಮೃತಪಟ್ಟ ಇಬ್ಬರ ಕುಟುಂಬಸ್ಥರ ಜತೆ ಮಾತನಾಡಿದ ಬಳಿಕ ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.


ಅಧಿಕಾರಿಗಳ ಜತೆ ಚರ್ಚೆ ಮಾಡಿ ನಾಳೆ ಹಗಲು ಹೊತ್ತು ಪೂರ್ಣವಾಗಿ ಕರ್ಫ್ಯೂ ಸಡಿಲಿಕೆ ಹಾಗೂ ನಾಳೆ ರಾತ್ರಿ ಕರ್ಫ್ಯೂ ಮುಂದುವರಿಯಲಿದೆ. ಸೋಮವಾರದಿಂದ ಕರ್ಫ್ಯೂ ತೆರವುಗೊಳುತ್ತದೆ. 144 ಸೆಕ್ಷನ್ ಮುಂದುವರಿಯಲಿದೆ. ಕ್ರಿಸ್‌ಮಸ್ ಹಾಗೂ ಇತರ ಹಬ್ಬ ಹರಿದಿನಗಳಿದ್ದಲ್ಲಿ ತೊಂದರೆ ಆಗದಂತೆ ಕ್ರಮ ವಹಿಸಲು ಅಧಿಕಾರಿಗಳ ಜತೆ ಸಮಾಲೋಚನೆ ಮಾಡಿ ಸೂಚನೆ ನೀಡಲಾಗಿದೆ. ಪೌರತ್ವ ಕಾಯ್ದೆಯ ವಿರೋಧಕ್ಕೆ ಸಂಬಂಧಿಸಿ ನಾನು ಬೆಂಗಳೂರಿನಲ್ಲಿ ಮುಸ್ಲಿಂ ನಾಯಕರ ಜತೆ ಅಲ್ಲಿಯೂ ಮಾತುಕತೆ ನಡೆಸಿದ್ದೇನೆ.

ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದರು. ಆದರೆ ಮಂಗಳೂರಿನಲ್ಲಿ ಕಾನೂನು ಕೈಗೆ ತೆಗೆದುಕೊಳ್ಳುವ ಪ್ರಯತ್ನವಾದ್ದರಿಂದ ಅಹಿತಕರ ಘಟನೆಗಳು ನಡೆದಿವೆ. ಈ ಬಗ್ಗೆ ಯಾವ ರೀತಿ ತನಿಖೆ ಆಗಬೇಕೆಂದು ತೀರ್ಮಾನಿಸಿ ಕ್ರಮ ವಹಿಸಲಾಗುವುದು. ಕಾನೂನು ಚೌಕಟ್ಟಿನಲ್ಲಿ ಮೃತಪಟ್ಟ ಕುಟುಂಬಕ್ಕೆ ಪರಿಹಾರ ನೀಡಲು ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ. ಕೇರಳದಿಂದ ಪತ್ರಕರ್ತರು ಗುರುತು ಚೀಟಿ ಇಲ್ಲದೆ, ಕಾನೂನುಬಾಹಿರವಾಗಿ ಹೇಗೆ ಬಂದರು ಎಂದು ತನಿಖೆಯಿಂದ ಸತ್ಯ ಸಂಗತಿ ಹೊರ ಬರಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.


ನಮ್ಮ ಸರಕಾರ ಯಾವತ್ತೂ ಹಿಂದೂ, ಮುಸ್ಲಿಂ, ಕ್ರೈಸ್ತ ಎಂದು ಬೇಧಭಾವ ಮಾಡುವುದಿಲ್ಲ. ಎಲ್ಲಾ ರೀತಿಯ ಸಹಕಾರವನ್ನು ಎಲ್ಲರೂ ನೀಡಿದ್ದಾರೆ. ಮುಂದೆಯೂ ನೀಡಬೇಕೆಂದು ಅವರು ಹೇಳಿದರು.
ಗೋಷ್ಠಿಯಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ಸಂಜೀವ ಮಠಂದೂರು, ಡಾ. ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ವೇದವ್ಯಾಸ ಕಾಮತ್, ಹರೀಶ್ ಪೂಂಜ, ಅಂಗಾರ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!