ಕರ್ತವ್ಯ ಪ್ರಜ್ಞೆ, ಪ್ರಾಮಾಣಿಕತೆಯಿಂದ ಯಶಸ್ಸು ಸಾಧ್ಯ: ಉಮೇಶ್
ಕಾರ್ಕಳ: ಪ್ರಮಾಣಿಕವಾಗಿ ದುಡಿದಾಗ ತನ್ನಂದ ತಾನೇ ಸಮಾಜ ಗುರುತಿಸುವ ಕಾರ್ಯ ನಡೆಸುತ್ತದೆ. ಕರ್ತವ್ಯ ನಿಷ್ಠೆ, ಪ್ರಮಾಣಿಕತೆಯನ್ನು ಪ್ರತಿಯೊಂದು ಕ್ಷೇತ್ರ ತೋರ್ಪಡಿಸಬೇಕು. ಮಕ್ಕಳಲ್ಲಿ ಇರುವ ಪ್ರತಿಭೆಗಳನ್ನು ಗುರುತಿಸಿದಾಗ ಅವರು ಮುಂದಿನ ದಿನಗಳಲ್ಲಿ ಯಶಸ್ಸಿನ ಉತ್ತುಂಗಕ್ಗಕೇರಲು ಸಾಧ್ಯವಿದೆ. ಅದರ ಫಲವನ್ನು ಸಮಾಜ ಗುರುತಿಸುತ್ತದೆ ಎಂದು ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಹಾಗೂ ಬಜಗೋಳಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಉಮೇಶ್ ರಾವ್ ಹೇಳಿದರು.ಕಾರ್ಕಳ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಗುರುವಾರ ನಡೆದ ಉಚಿತ ಆರೋಗ್ಯ ಕಾರ್ಡ್ ವಿತರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಶುಭ ಹಾರೈಸಿದರು .
ಗಿನ್ನಿಸ್ ದಾಖಲೆ ಪಡೆದ ಸುರೇಂದ್ರ ಆಚಾರ್ಯ ಇದೇ ಸಂದರ್ಭದಲ್ಲಿ ಮಾತನಾಡಿ, ತೆರೆಮರೆಯಲ್ಲಿರುವ ಕಲಾವಿದರ ಗುರುತಿಸುವ ಕಾರ್ಯವನ್ನು ಮಾಧ್ಯಮ ಕ್ಷೇತ್ರ ಮಾಡಿದೆ. ಒಬ್ಬ ಕಲಾವಿದ ಮತ್ತೊಬ್ಬರನ್ನು ಗುರುತಿಸುವ ಕಾರ್ಯ ನಡೆಸಬೇಕು. ಸಮಾಜ ಕಲಾವಿದರನ್ನು ಗುರುತಿಸುವ ಕಾರ್ಯ ನಡೆಸಿದಾಗ ಇನ್ನಷ್ಟು ಪ್ರತಿಭೆಗಳು ಬೆಳಕಿಗೆ ಬರಲು ಸಾಧ್ಯ ಎಂದರು.
“ಆರೋಗ್ಯವನ್ನು ಪ್ರತಿಯೊಬ್ಬರು ಕಾಪಾಡಿಕೊಳ್ಳಬೇಕು. ಈ ನಡುವೆ ಆರೋಗ್ಯದಲ್ಲಿ ವ್ಯತ್ಯಾಸವಾದಾಗ ನೆರವನ್ನು ಪಡೆಯಲು ಮಣಿಪಾಲ ಆರೋಗ್ಯಕಾರ್ಡನ್ನು ವಿತರಿಸಲಾಗುತ್ತಿದೆ” ಎಂದು ಕೆಎಂಸಿ ಮಾರ್ಕೆಟಿಂಗ್ ವಿಭಾಗದ ಮ್ಯಾನೇಜರ್ ಮೋಹನ್ ಶೆಟ್ಟಿ ಹೇಳಿದ್ದಾರೆ.
ಕ್ರೈಸ್ಟ್ಕಿಂಗ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಹಾಗೂ ಉದ್ಯಮಿ ಅವೆಲಿನ್ ಆರ್.ಲೂಯಿಸ್ ಪತ್ರಕರ್ತರಿಗೆ ಶುಭ ಹಾರೈಸಿದರು.ವೇದಿಕೆಯಲ್ಲಿ ಟಿಎಂಎ ಪೈ ಆಸ್ಪತ್ರೆಯ ಸೀನಿಯರ್ ಎಕ್ಸುಕಿಟಿವ್ ನಟೇಶ್, ಎಕ್ಸೆಕ್ಯೂಟಿವ್ ಶ್ರೀನಿವಾಸ ಭಾಗವತ್ ಉಪಸ್ಥಿತರಿದ್ದರು.
ಇದೇ ಸಂದರ್ಭ ರಾಜ್ಯ ಶಿಕ್ಷಕ ಪ್ರಶಸ್ತಿ ವಿಜೇತ ಶಿಕ್ಷಕ ಉಮೇಶ್ ಹಾಗೂ ಪೆನ್ಸಿಲ್ ಕಲಾಕೃತಿಯಲ್ಲಿ ಗಿನ್ನಿಸ್ ದಾಖಲೆ ಮಾಡಿರುವ ನೂರಾಳ್ಬೆಟ್ಟು ಸುರೇಂದ್ರ ಆಚಾರ್ಯ ಅವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆರ್.ಬಿ.ಜಗದೀಶ್ ಸ್ವಾಗತಿಸಿದರು. ಮೊಹಮ್ಮದ್ ಶರೀಫ್ ಕಾರ್ಯಕ್ರಮ ನಿರೂಪಿಸಿದರು. ಸಂಪತ್ ನಾಯಕ್ ವಂದಿಸಿದರು.