ಗಿರಿಗಿಟ್ ಬೆಂಗಳೂರಿನಲ್ಲೂ ಯಶಸ್ಸು: ಜಯಣ್ಣ ಫಿಲಂಸ್ಗೆ ಕ್ರೆಡಿಟ್ಟು
ಕೆಲವು ಪ್ರಥಮಗಳಿಗೆ ಸಾಕ್ಷಿಯಾಗಿರುವ ಈ ಬಾರಿಯ ಅತಿ ನಿರೀಕ್ಷೆಯ ಸಿನಿಮಾ ಗಿರಿಗಿಟ್ ಈಗ ಬೆಂಗಳೂರಿನಲ್ಲಿ ಬಿಡುಗಡೆಯಾಗಿದೆ. ಇದರಲ್ಲೇನು ಮಹಾ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಈ ಸುದ್ದಿ ವಿಶೇಷತೆ ಗಳಿಸಲು ಪ್ರಮುಖ ಕಾರಣವೆಂದರೆ ಇದನ್ನು ಯಾರು ಬಿಡುಗಡೆ ಮಾಡುತ್ತಾರೆ ಎಂಬುದು. ಕರ್ನಾಟಕದ ಅತಿ ದೊಡ್ಡ ಸಿನಿಮಾ ವಿತರಕ ಸಂಸ್ಥೆಯಾಗಿರುವ ಜಯಣ್ಣ ಫಿಲಂಸ್ನವರು ಸೆ. 6ರಂದು ಬೆಂಗಳೂರಿನಲ್ಲಿ ಗಿರಿಗಿಟ್ ಸಿನಿಮಾ ವನ್ನು ಬಿಡುಗಡೆ ಮಾಡಿದ್ದಾರೆ. ಇದು ತುಳು ಸಿನಿಮಾ ರಂಗಕ್ಕೆ ಒಂದು ಅತಿ ದೊಡ್ಡ ಹೆಮ್ಮೆಯ ಸಂಗತಿ.
ಜಯಣ್ಣ ಫಿಲಂಸ್ನವರು ಇದೇ ಮೊದಲ ಬಾರಿಗೆ ತುಳು ಸಿನಿಮಾವೊಂದನ್ನು ಬಿಡುಗಡೆ ಮಾಡಿದೆ. ಗಿರಿಗಿಟ್ ಸಿನಿಮಾಕ್ಕೆ ತುಳುನಾಡಿನಲ್ಲಿ ಸಿಕ್ಕಿರುವ ಭರ್ಜರಿ ರೆಸ್ಪಾನ್ಸ್ ಮತ್ತು ಇದು ಹೊಂದಿರುವ ವಿಶೇಷತೆ, ಗುಣಮಟ್ಟದ ಕಾರಣದಿಂದ ಜಯಣ್ಣ ಫಿಲಂಸ್ನವರು ಈ ಸಿನಿಮಾವನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದ್ದಾರೆ. ಆ ಮೂಲಕ ಕನ್ನಡದ ನೆಲದ ಸಿನಿಮಾ ಮಂದಿರದ ಪರದೆಯಲ್ಲೂ ತುಳುವಿನ ದನಿ ಕೇಳಿ ಬರಲಿದೆ.
ಗಿರಿಗಿಟ್ ಸಿನಿಮಾವು ಈಗ ತುಳುನಾಡಿನ ವಿವಿಧೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಇದೇ ಮೊದಲ ಬಾರಿಗೆ ಒಂದೇ ವಾರದಲ್ಲಿ ಕೋಟಿ ಕ್ಲಬ್ಗೆ ಸೇರಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಇದು ತುಳು ಚಿತ್ರರಂಗದ ಪಾಲಿಗೆ ಹೆಮ್ಮೆಯ ಸಂಗತಿಯೇ. ವಿಮರ್ಶಕರು ಮತ್ತು ಪ್ರೇಕ್ಷಕರಿಂದಲೂ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿರುವ ಗಿರಿಗಿಟ್ ಬೆಂಗಳೂರಿನಲ್ಲಿ ಮಾಡಲಿರುವ ಸಾಧನೆ ಬಗ್ಗೆ ಈಗ ಎಲ್ಲರ ಗಮನ ನೆಟ್ಟಿದೆ.