ವಿದ್ಯಾರ್ಥಿಗಳು ಸೇವಾ ಮನೋಭಾವ ಮತ್ತು ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು

ಉಡುಪಿ: ವಿದ್ಯಾರ್ಥಿಗಳು ಸೇವಾ ಮನೋಭಾವ ಮತ್ತು ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು. ಇದರಿಂದ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಗುರುತಿಸಿಕೊಳ್ಳಲು ಸಾಧ್ಯವಿದೆ ಎಂದು ಪೊಲೀಸ್‌ ಉಪನಿರೀಕ್ಷಕ ಅನಂತ ಪದ್ಮನಾಭ ಹೇಳಿದರು.

ವಳಕಾಡು ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಈಚೆಗೆ ನಡೆದ ಇಂಟರ್‍ಯಾಕ್ಟ್‌ ಕ್ಲಬ್‌ ಉದ್ಘಾಟನಾ ಸಮಾರಂಭದಲ್ಲಿ ‘ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ’ ವಿಷಯದ ಕುರಿತು ಮಾತನಾಡಿದರು.
ವಿದ್ಯಾರ್ಥಿಗಳು ರಸ್ತೆ ಸುರಕ್ಷತೆ ಬಗ್ಗೆ ಮಾಹಿತಿ ತಿಳಿದುಕೊಂಡು ಅದನ್ನು ಇತರರಿಗೂ ತಿಳಿಸಬೇಕು. ಇದರಿಂದ ರಸ್ತೆ ಸುರಕ್ಷತೆಯ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುವುದರ ಜತೆಗೆ ರಸ್ತೆ ಅಪಘಾತಗಳನ್ನು ತಡೆಗಟ್ಟಲು ಸಾಧ್ಯವಿದೆ ಎಂದರು.

ಉಡುಪಿ ರೋಟರಿ ಕ್ಲಬ್‌ನ ಅಧ್ಯಕ್ಷ ಜನಾರ್ದನ ಭಟ್‌ ಮಾತನಾಡಿ, ಜೀವನ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಇಂಟರ್‍ಯಾಕ್ಟ್‌ ಕ್ಲಬ್‌ಗಳು ಪೂರಕವಾಗಿದ್ದು, ಈ ಮೂಲಕ ವಿದ್ಯಾರ್ಥಿಗಳು ಸನ್ನಡತೆಗಳನ್ನು ಬೆಳೆಸಿಕೊಂಡು ಉತ್ತಮ ನಾಗರಿಕರಾಗಿ ಬಾಳಬೇಕು ಎಂದರು. ಶಾಲಾ ಮುಖ್ಯೋಪಾಧ್ಯಾಯಿನಿ ಬಿ. ನಿರ್ಮಲ ಅಧ್ಯಕ್ಷತೆ ವಹಿಸಿದ್ದರು. ಡಾ. ಸುರೇಶ್‌ ಶೆಣೈ ರಸ್ತೆ ಸುರಕ್ಷತೆ ಬಗ್ಗೆ ಮಾಹಿತಿ ನೀಡಿದರು.

ಶಾಲಾ ಇಂಟರ್‍ಯಾಕ್ಟ್‌ ಕ್ಲಬ್‌ ಅಧ್ಯಕ್ಷೆ ಭವ್ಯ ನಾಯಕ್‌ ಪದಗ್ರಹಣ ಮಾಡಿದರು. ರೋಟರಿಯ ಗುರುರಾಜ ಭಟ್‌ ರೋಟರಿಯ ಧ್ಯೇಯೋದ್ದೇಶಗಳ ಬಗ್ಗೆ ಮಾಹಿತಿ ನೀಡಿದರು. ಮಕ್ಕಳ ಸಹಾಯವಾಣಿ ಕಾರ್ಯಕರ್ತೆ ಜ್ಯೋತಿ ಮಕ್ಕಳ ಹಕ್ಕುಗಳು ಮತ್ತು ರಕ್ಷಣೆಯ ಬಗ್ಗೆ ತಿಳಿಸಿದರು. ರೋಟರಿಯ ಬಿ.ವಿ. ಲಕ್ಷ್ಮೀನಾರಾಯಣ, ರಾಧಿಕಾ ಉಪಸ್ಥಿತರಿದ್ದರು. ಇಂಟರ್‍ಯಾಕ್ಟ್‌ ಕ್ಲಬ್‌ ಉಪಾಧ್ಯಕ್ಷೆ ಭೂಮಿಕಾ ಸ್ವಾಗತಿಸಿದರು. ಮಂಜುನಾಥ್‌
ವಂದಿಸಿದರು. ಕಾರ್ಯದರ್ಶಿ ರಕ್ಷಿತಾ ಹಾಗೂ ಶಿಕ್ಷಕಿ ಶಾಂತಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!