ಲಾಕ್ ಡೌನ್ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ: ಕೇಂದ್ರ ಸೂಚನೆ
ನವದೆಹಲಿ: ಕೊರೋನಾ ವೈರಸ್ ಹತ್ತಿಕ್ಕಲು ವಿಧಿಸಲಾಗಿರುವ ಲಾಕ್’ಡೌನ್ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿ ತರಲು ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರ ಸೂಚಿಸಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದೆ.
ಭಾರತದಲ್ಲಿ ಈಗಾಗಲೇ 424 ಮಂದಿಯಲ್ಲಿ ವೈರಸ್ ದೃಢಪಟ್ಟಿದ್ದು, 8 ಮಂದಿ ಬಲಿಯಾಗಿದ್ದಾರೆ. ನಿತ್ಯ ಕೊರೋನಾ ಪೀಡಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಹೀಗಾಗಿ ಮಾರ್ಚ್ 31ರವರೆಗೆ ಕೇವಲ ಅತ್ಯಗತ್ಯ ಸೇವೆಗಳು ಮಾತ್ರ ಕಾರ್ಯನಿರ್ವಹಿಸಲಿವೆ. ಸಂಪುಟ ಕಾರ್ಯದರ್ಶಿ ಮತ್ತು ಪ್ರಧಾನಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿ ಬಂದ್ ಮಾಡುವ ನಿರ್ಧಾರವನ್ನು ಕೈಗೊಳ್ಳಲಾಗಿತ್ತು.
ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲೇಬೇಕು ಎಂದು ಕೇಂದ್ರ ಸರ್ಕಾರ ಆದೇಶದಲ್ಲಿ ತಿಳಿಸಿದೆ. ಒಂದೊಮ್ಮೆ ಆದೇಶ ಮೀರಿದರೆ ಶಿಸ್ತು ಕ್ರಮ ಕೈಗೊಳ್ಳುತ್ತೇವೆಂದು ತಿಳಿಸಲಾಗಿದೆ. ಇಂದಿನಿಂದ ರೈಲು ಸೇವೆ, ಅಂತರ್ ರಾಜ್ಯ ಬಸ್ ಸೇವೆ, ಎಲ್ಲಾ ಮೆಟ್ರೋ ರೈಲು ಸೇವೆಗಳು, ಅಂತರಾಷ್ಟ್ರೀಯ ಗಡಿಗಳು ಬಂದ್ ಆಗಿವೆ. ಬ್ಯಾಂಕ್ ಗಳಿಂದ ಅಗತ್ಯ ಸೇವೆ ಮಾತ್ರ ಲಭ್ಯವಿರಲಿದೆ.
ವೈರಸ್ ಮಟ್ಟ ಹಾಕಲು ರಾಜ್ಯ ಹಾಗೂ ಕೇಂದ್ರ ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಆದರೂ ವೈರಸ್ ನಿಯಂತ್ರಣಕ್ಕೆ ಬರುತ್ತಿಲ್ಲ. ಇದೀಗ ದೇಶದಾದ್ಯಂತ ವೈರಸ್’ಗೆ 8 ಮಂದಿ ಬಲಿಯಾಗಿದ್ದಾರೆ.